ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ: ಸದನ ಸಮಿತಿ ಗರಂ
ಜಿಲ್ಲಾ ಮಟ್ಟದ ಪರಿಶೀಲನಾ ಸಭೆ

ಶಿವಮೊಗ್ಗ, ಜೂ. 1: ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಸಭೆಗಳನ್ನು ಸಮರ್ಪಕವಾಗಿ ನಡೆಸದ ಹಾಗೂ ಪ್ರಧಾನಮಂತ್ರಿಯವರ 15 ಅಂಶಗಳ ಯೋಜನೆಗಳನ್ನು ಜಾರಿಗೊಳಿಸದ ಬಗ್ಗೆ ವಿಧಾನಮಂಡಲದ ಸದನ ಸಮಿತಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಬುಧವಾರ ಶಿವಮೊಗ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಎರಡೂ ಜಿಲ್ಲೆಗಳ ಪ್ರಗತಿ ಪರಿಶೀಲನೆಯನ್ನು ಸದನ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿರುದ್ಧ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ನಿರ್ಲಕ್ಷ್ಯ ತೋರಲಾಗಿದೆ:
ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದೀರಿ. ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ಯೋಜನೆಯನ್ನು ಕಾರ್ಯಗತಗೊಳಿಸದಿದ್ದರೆ ಯೋಜನೆಯಾದರೂ ಏಕೆ ಬೇಕು. ನೀವೇ ಆಸಕ್ತಿ ತೋರದಿದ್ದರೆ ಹೇಗೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಯನ್ನು ಸಮಿತಿಯ ಅಧ್ಯಕ್ಷ ಲೋಬೊ ಖಾರವಾಗಿ ಪ್ರಶ್ನಿಸಿದರು. ಬಳಿಕ ಶಿವಮೊಗ್ಗ ಜಿಲ್ಲೆಯ ಚರ್ಚೆಯ ವೇಳೆ, ಸಭೆಗೆ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿಯವರು ಗೈರು ಹಾಜರಾಗಿರುವುದು ಸಮಿತಿಯ ಅಸಮಾಧಾನಕ್ಕೆ ಕಾರಣವಾಯಿತು. ಡಿ.ಸಿ.ಪರವಾಗಿ ಮಾತನಾಡಲು ಎದ್ದು ನಿಂತ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪರವರಿಗೆ ಡಿಸಿಯವರನ್ನು ಬರಹೇಳುವಂತೆ ಸದನ ಸಮಿತಿ ಸೂಚಿಸಿತು.
ಮಾಹಿತಿಯಿಲ್ಲ: ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸಭೆ ಕರೆದ ಬಗ್ಗೆ ಯಾವುದೇ ಮಾಹಿತಿ ಸದನದ ಸಮಿತಿಗೆ ಬಂದಿಲ್ಲ. ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಜಿಲ್ಲಾಧಿಕಾರಿಯವರು ಸಭೆ ಕರೆಯದಿದ್ದರೆ ಮತ್ತೆ ಇನ್ಯಾರು ಸಭೆ ಕರೆಯಬೇಕು ಎಂದು ಎರಡೂ ಜಿಲ್ಲಾಡಳಿತಗಳ ವಿರುದ್ಧ ಸಮಿತಿಯ ಸದಸ್ಯರು ಕಿಡಿಕಾರಿದರು. ಬಹುತೇಕ ಜಿಲ್ಲೆಗಳಲ್ಲಿ ಯೋಜನೆಯನ್ನು ಗಾಳಿಗೆ ತೂರಲಾಗಿದೆ. ಅಧಿಕಾರಿಗಳಿಗೆ ಇಂತಹ ಯೋಜನೆ ಬೇಕಿಲ್ಲ. ಒಂದೇ ಒಂದು ಸಭೆ ನಡೆಸದೆ ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂದು ಇದೇ ಸಂದರ್ ಸಮಿತಿಯ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಾಹಿತಿ: ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಅವರ ಕುಂದುಕೊರತೆಗಳ ಸಭೆಯ ಬಗ್ಗೆ ಎರಡೂ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಜಿಲ್ಲಾ ವ್ಯಾಪ್ತಿಗಳ ಮಾಹಿತಿ ನೀಡಿದರು. ಶಿವಮೊಗ್ಗ ಎಸ್ಪಿ ರವಿ ಡಿ. ಚೆನ್ನಣ್ಣವರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿವಾರ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಅಲ್ಲದೆ ಸಾರ್ವಜನಿಕವಾಗಿ ದೂರು ಪೆಟ್ಟಿಗೆ ಇಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆ ಇದೆ ಎಂದರು.
ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಅಧಿಕಾರಿಗಳ, ಠಾಣೆಯ ನಂಬರ್‌ನ್ನು ಬರೆಯಲಾಗಿದೆ. ಜಿಲ್ಲೆಯಲ್ಲಿ 80 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, 12 ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಎಚ್ಚರಿಕೆ: ಎರಡೂ ಜಿಲ್ಲೆಗಳಲ್ಲಿ ಗಂಗಾ ಕಲ್ಯಾಣ ಯೋಜನೆಯನ್ನು ಕಾಲಮಿತಿಯಗೊಳಗೆ ಅನುಷ್ಠಾನಗೊಳಿಸದಿರುವ ಬಗ್ಗೆ ಸಮಿತಿಯು ತೀವ್ರ ಬೇಸರ ವ್ಯಕ್ತಪಡಿಸಿತು. ಹಾಗೆಯೇ ಫಲಾನುಭವಿಗಳ ಪಟ್ಟಿ ಕೊಡುವಲ್ಲಿ ವಿಫಲರಾದ ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಯೋಬ್ಬರನ್ನು ಅಮಾನತುಗೊಳಿಸುವ ಎಚ್ಚರಿಕೆನ್ನೂ ಸಮಿತಿ ನೀಡಿತು.
ಸಭೆಯಲ್ಲಿ ಸದನ ಸಮಿತಿ ಸದಸ್ಯರಾದ ಶಾಸಕ ಮಧು ಬಂಗಾರಪ್ಪ, ಎಸ್. ಅಂಗಾರ, ಕೆ. ಅಬ್ದುಲ್ ಜಬ್ಬಾರ್, ಎಂ. ಲಕ್ಷ್ಮೀನಾರಾಯಣ, ಜಯಮ್ಮ ಬಾಲರಾಜ್, ಎಂ. ರಾಜಣ್ಣ , ಸಮಿತಿಯ ಉಪಕಾರ್ಯದರ್ಶಿ ಎಸ್. ಪರಶಿವಮೂರ್ತಿ ಹಾಜರಿದ್ದರು.







