ವೆದ್ಯ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮ: ಸಚಿವ ಖಾದರ್
ಗೋಣಿಕೊಪ್ಪಸರಕಾರಿ ಆಸ್ಪತ್ರೆಗೆ ಭೇಟಿ; ಪರಿಶೀಲನೆ

ಮಡಿಕೇರಿ ಜೂ.1: ರಾಜ್ಯದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಒಂದು ತಿಂಗಳಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.
ಗೋಣಿಕೊಪ್ಪಸರಕಾರಿ ಆಸ್ಪತ್ರೆಗೆ ಬುಧವಾರ ಭೇಟಿನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಸ್ಪತ್ರೆಗೆ ದಾಖಲಾಗುವವರಿಗೆ ಅಗತ್ಯ ಔಷದೋಪಚಾರ ಹಾಗೂ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿದೆ. ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಶುಚಿತ್ವಕ್ಕೆ ಒತ್ತು ನೀಡಲು ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಯು.ಟಿ. ಖಾದರ್ ತಿಳಿಸಿದರು. ರೋಗಿಗಳಿಗೆ ಊಟೋಪಚಾರ ನೀಡಿ
ಸರಕಾರ ಹಲವು ಸೌಲಭ್ಯಗಳನ್ನು ನೀಡಿದರೂ ರೋಗಿಗಳಿಗೆ ಊಟೋಪಚಾರ ನೀಡದಿರುವ ಬಗ್ಗೆ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಸಚಿವರು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಈ ಸಂಬಂಧ ಪರಿಶೀಲನೆ ನಡೆಸಬೇಕು. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೂ ತೆರಳಿ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು ಎಂದು ಆದೆಶೀಸಿದರು.
ಜಿ.ಪಂ. ಸದಸ್ಯರಾದ ಬಾನಂಡ ಪ್ರಥ್ಯು ಅವರು ಗೋಣಿಕೊಪ್ಪ ಆಸ್ಪತ್ರೆ ಕುಂದುಕೊರತೆ ಸಂಬಂಧಿಸಿದಂತೆ ಸಚಿವರ ಗಮನ ಸೆಳೆದರು. ತಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ.ಆರ್.ಶ್ರೀರಂಗಪ್ಪ ಆಸ್ಪತ್ರೆ ಸೌಲ್ಯ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು, ಆರ್‌ಸಿಎಚ್ ಅಧಿಕಾರಿ ಡಾ.ಪಾರ್ವತಿ, ಗೋಣಿಕೊಪ್ಪ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ, ಬಿ.ಎನ್.ಪ್ರಕಾಶ್, ಗ್ರಾಪಂ ಸದಸ್ಯರು ಮತ್ತಿತರರು ಹಾಜರಿದ್ದರು.
ಆಯಿರ ಸುಳಿಯಲ್ಲಿ ಸಾಂಕ್ರಾಮಿಕ ರೋಗ
ತಿತಿಮತಿ ಸಮೀಪದ ಆಯಿರ ಸುಳಿಯಲ್ಲಿ ಸಾಂಕ್ರಾಮಿಕ ರೋಗ ಹರಡಿರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಲು ಮುಂದಿನ ವಾರದಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಹಾವು ಹಾಗೂ ನಾಯಿ ಕಡಿತಕ್ಕೆ ಆಸ್ಪತ್ರೆಯಲ್ಲಿ ಔಷಧಿ ಕಡ್ಡಾಯವಾಗಿ ಇರಬೇಕು. ಇಲ್ಲದಿದ್ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದಲೇ ಔಷಧಿ ಖರೀದಿಸಿ ನೀಡಬೇಕು. ಆ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು ಎಂದರು. ಸಚಿವರ ಭೇಟಿಯ ವೇಳೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು, ಸರಕಾರಿ ಆಸ್ಪತ್ರೆಗೆ ದಾಖಲಾಗುವವರಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡ ಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಎಲ್ಲರಿಗೂ ಉತ್ತಮ ಆಹಾರ ನಿರ್ದೇಶನ ನೀಡಿ ದರು. ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿ ಸುವವರಿಗೆ ಪ್ರತೀ ತಿಂಗಳು ವೇತನ ನೀಡಬೇಕು. ಪಿ.ಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಹೊರಗುತ್ತಿಗೆ ನೌಕರರಿಂದ ಯಾವುದೇ ದೂರುಗಳು ಕೇಳಿ ಬರದಂತೆ ನೋಡಿಕೊಳ್ಳಬೇಕು ಎಂದು ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.







