ಭಾರತ-ಮೊರೊಕ್ಕೊ ಜಂಟಿ ಕೈಗಾರಿಕಾ ಸಂಸ್ಥೆಗೆ ಅನ್ಸಾರಿ ಚಾಲನೆ

ರಬತ್, ಜೂ. 1: ಸಂಪನ್ಮೂಲಗಳ ಖನಿ ಆಫ್ರಿಕ ವಲಯದಲ್ಲಿ ತನ್ನ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದಕ್ಕಾಗಿ ಮೊರೊಕ್ಕೊವನ್ನು ಬಳಸಲು ಭಾರತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ವಾಣಿಜ್ಯ ಸಂಬಂಧವನ್ನು ಬಲಪಡಿಸಲು ಭಾರತ ಮತ್ತು ಮೊರೊಕ್ಕೊಗಳು ಜಂಟಿ ವಾಣಿಜ್ಯ ಸಂಸ್ಥೆಯೊಂದನ್ನು ಆರಂಭಿಸಿವೆ.
ಮೊರೊಕ್ಕೊಗೆ ಭೇಟಿ ನೀಡಿರುವ ಭಾರತದ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಮತ್ತು ಮೊರೊಕ್ಕೊ ಪ್ರಧಾನಿ ಅಬ್ದುಲ್ ಇಲಾಹ್ ಬೆನ್ ಕಿರಾನಿ ಮಂಗಳವಾರ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಇಂಡಿಯ-ಮೊರೊಕ್ಕೊ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಐಎಂಸಿಸಿಐ)ಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನ್ಸಾರಿ, ನಮ್ಮ ನಿರ್ಲಕ್ಷದ ಹಿನ್ನೆಲೆಯಲ್ಲಿ ಈವರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯೊಂದು ಅಸ್ತಿತ್ವದಲ್ಲಿರಲಿಲ್ಲ ಎಂದರು.
ಜಗತ್ತು ಬದಲಾಗುತ್ತಿದೆ ಹಾಗೂ ಅದು ಜಾಗತೀಕರಣಗೊಂಡ ಜಗತ್ತಾಗುತ್ತಿದೆ ಎಂದರು.
‘‘ಐಎಂಸಿಸಿಐ ಯಂಥ ಸಂಸ್ಥೆಗಳು ನಮಗೆ ಅಗತ್ಯವಾಗಿವೆ’’ ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಉಪರಾಷ್ಟ್ರಪತಿಯೊಬ್ಬರು ಮೊರೊಕ್ಕೊಗೆ ಭೇಟಿ ನೀಡುತ್ತಿರುವುದು 50 ವರ್ಷಗಳಲ್ಲೇ ಮೊದಲ ಬಾರಿಯಾಗಿದೆ.







