ರಿಯೋ ಒಲಿಂಪಿಕ್ಸ್: ವೃತ್ತಿಪರ ಬಾಕ್ಸರ್‌ಗಳಿಗೆ ಸ್ಪರ್ಧೆಗೆ ಅವಕಾಶ
ಲಾಸನ್ನೆ, ಜೂ.1: ಮುಂಬರುವ ರಿಯೋ ಡಿಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ನಲ್ಲಿ ವೃತ್ತಿಪರ ಬಾಕ್ಸರ್‌ಗಳು ಸ್ಪರ್ಧಿಸಬಹುದು ಎಂದು ಜಾಗತಿಕ ಬಾಕ್ಸಿಂಗ್ ಆಡಳಿತ ಮಂಡಳಿ ಬುಧವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸ್ವಿಟ್ಝರ್‌ಲೆಂಡ್‌ನ ಲಾಸನ್ನೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘಟನೆಯ(ಎಐಬಿಎ) 88 ಸದಸ್ಯರುಗಳು ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿದರು.
ಎಐಬಿಎನ ಇಂತಹ ಕ್ರಾಂತಿಕಾರಿ ನಿರ್ಧಾರದಿಂದ ರಿಯೋ ಗೇಮ್ಸ್‌ನಲ್ಲಿ ಬಾಕ್ಸಿಂಗ್ ಸ್ಟಾರ್‌ಗಳು ಭಾಗವಹಿಸುವ ಸಾಧ್ಯತೆಯಿಲ್ಲ. ಮಾಜಿ ಹೇವಿವೇಟ್ ಚಾಂಪಿಯನ್ ವ್ಲಾಡಿಮಿರ್ ಕ್ಲಿಟ್ಸೆಚೆಕೊ ಸಹಿತ ಹೆಚ್ಚಿನ ವೃತ್ತಿಪರ ಬಾಕ್ಸರ್‌ಗಳಿಗೆ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬಾಕ್ಸಿಂಗ್‌ನಲ್ಲಿ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದ್ದು, 2012ರ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಮಹಿಳಾ ಬಾಕ್ಸರ್‌ಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಈ ವರ್ಷದ ರಿಯೋ ಗೇಮ್ಸ್‌ನಲ್ಲಿ ಬಾಕ್ಸರ್‌ಗಳು ಶಿರರಕ್ಷಕ ಬಳಸುವುದನ್ನು ಕಡ್ಡಾಯಗೊಳಿಸಿಲ್ಲ.
ವಿಜೇಂದರ್ ಭಾಗವಹಿಸುವುದಿಲ್ಲ
ವೃತ್ತಿಪರ ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬಹುದು ಎಂದು ಎಐಬಿಎ ಮಹತ್ವದ ತೀರ್ಮಾನ ಕೈಗೊಂಡಿದ್ದರೂ, ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿಲ್ಲ. ವಿಜೇಂದರ್‌ಗೆ ಒಲಿಂಪಿಕ್ಸ್ ಟೂರ್ನಿಯಲ್ಲಿ ಭಾಗವಹಿಸುವಷ್ಟು ಸಮಯವಿಲ್ಲ.
‘‘ಎಐಬಿಎ ನಿರ್ಧಾರವನ್ನು ನಾನು ಸ್ವಾಗತಿಸುವೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಂಬಂಧ ಇನ್ನಷ್ಟೇ ಎಲ್ಲ ಪ್ರಕ್ರಿಯೆ ಪೂರೈಸಬೇಕಾಗಿದೆ. ದೇಶದಲ್ಲಿ ಫೆಡರೇಶನ್ ಇಲ್ಲ. ನನಗೆ ಯಾರೂ ಮಾರ್ಗದರ್ಶನ ನೀಡುವವರಿಲ್ಲ. ಇದೀಗ ನಾನು ಹೊಸದಿಲ್ಲಿಯಲ್ಲಿ ಜು.16 ರಂದು ನಡೆಯಲಿರುವ ಡಬ್ಲುಬಿಒ ಏಷ್ಯಾ ಪ್ರಶಸ್ತಿ ಗೆಲ್ಲುವತ್ತ ಗಮನ ನೀಡುತ್ತಿದ್ದೇನೆ’’ ಎಂದು ಕಳೆದ ವರ್ಷ ವೃತ್ತಿಪರ ಬಾಕ್ಸರ್ ಆಗಿ ಪರಿವರ್ತಿತಗೊಂಡಿರುವ ವಿಜೇಂದರ್ ಹೇಳಿದ್ದಾರೆ.







