ಮುಡಿಪು: ಅವೈಜ್ಞಾನಿಕ ರಸ್ತೆಗೆ ಶಾಶ್ವತ ಪರಿಹಾರಕ್ಕೆ ನಿರ್ಧಾರ
ಕೊಣಾಜೆ, ಜೂ. 1: ಮುಡಿಪು ಸಮೀಪದ ಕಂಬಳಪದವು ಬಳಿಯ ಇನ್ಫೊಸಿಸ್ ಕಂಪೆನಿಯ ಸಮೀಪ ಇರುವ ಏರು ತಗ್ಗಿನ ಅವೈಜ್ಞಾನಿಕ ರಸ್ತೆಗೆ ಶೀಘ್ರ ಮುಕ್ತಿ ದೊರೆಯಲಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್‌ರ ಸಲಹೆ ಮೇರೆಗೆ ಖಾಸಗಿ ಕಂಪೆನಿಯ ಸಹಕಾರದೊಂದಿಗೆ ಸುಮಾರು ಒಂದು ಕಿಲೋ ಮೀಟರ್ ವ್ಯಾಪ್ತಿಯ ರಸ್ತೆಯು ಮಾದರಿ ಚತುಷ್ಪಥ ರಸ್ತೆಯಾಗಿ ರೂಪುಗೊಳ್ಳಲಿದೆ.
ಮುಡಿಪು ಪ್ರದೇಶದಲ್ಲಿ ಖಾಸಗಿ ಕಂಪೆನಿ, ಶಿಕ್ಷಣ ಸಂಸ್ಥೆ, ವಾಣಿಜ್ಯ ಸಂಸ್ಥೆಗಳು ನೆಲೆಯೂರಿರುವುದರಿಂದ ಮುಡಿಪು ಪ್ರದೇಶವು ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ.
ತೊಕ್ಕೊಟ್ಟುವಿನಿಂದ ಮುಡಿಪುವರೆಗೆ ದ್ವಿಪಥ ರಸ್ತೆಯು ಈಗಾಗಲೇ ನಿರ್ಮಾಣಗೊಂಡಿದೆ. ಆದರೆ ಮುಡಿಪು ಇನ್ಫೊಸಿಸ್ ಬಳಿ ಏರು ತಗ್ಗು ರಸ್ತೆ ಇದ್ದ ಕಾರಣ ಈ ಭಾಗದ ರಸ್ತೆ ಮಾತ್ರ ಅಭಿವೃದ್ದಿ ಕಂಡಿರಲಿಲ್ಲ. ಇದರಿಂದಾಗಿ ಈ ಪ್ರದೇಶದಲ್ಲಿ ಇತ್ತೀಚೆಗೆ ಹಲವಾರು ಅವಘಡಗಳೂ ನಡೆದಿದ್ದವು. ಇದರಿಂದಾಗಿ ಈ ಭಾಗದ ಜನರಲ್ಲಿ ಅವೈಜ್ಞಾನಿಕ ರಸ್ತೆಯನ್ನು ಸರಿಪಡಿಸಬೇಕೆಂಬ ಆಗ್ರಹವೂ ಕೇಳಿ ಬಂದಿತ್ತು.
ಇದೀಗ ಸಚಿವ ಖಾದರ್‌ರ ಸಲಹೆಯ ಮೇರೆಗೆ ಖಾಸಗಿ ಸಂಸ್ಥೆಯ ಸಹಕಾರದೊಂದಿಗೆ ಮಾದರಿ ಚತುಷ್ಪಥ ರಸ್ತೆಯು ನಿರ್ಮಾಣಗೊಳ್ಳಲಿದೆ. ಜೂ.9ರಂದು ಚತುಷ್ಪಥ ರಸ್ತೆಗೆ ಶಂಕುಸ್ಥಾಪನೆಯು ನೆರವೇರಲಿದ್ದು ಗುರುವಾರದಂದು ಸರ್ವೇ ಕಾರ್ಯನಡೆಯಲಿದೆ.
ಆರೋಗ್ಯ ಸಚಿವ ಯು.ಟಿ.ಖಾದರ್, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಪ್ರಶಾಂತ್ ಕಾಜವ, ಜಲೀಲ್ ಮೋಂಟುಗೋಳಿ, ಪಜೀರು ಗ್ರಾ.ಪಂ.ಅಧ್ಯಕ್ಷ ಸೀತಾರಾಮ ಶೆಟ್ಟಿ, ಉಮ್ಮರ್ ಪಜೀರ್ ನೇತೃತ್ವದ ತಂಡ ಕಳೆದ ವಾರ ಈ ರಸ್ತೆಯ ಬಗ್ಗೆ ಪರಿಶೀಲನೆಯನ್ನು ನಡೆಸಿತ್ತು.







