ಮುಷ್ಕರ ಬೇಡ, ಬೇಡಿಕೆಗೆ ಸ್ಪಂದಿಸಿ: ಪೇಜಾವರ ಶ್ರೀ

ಉಡುಪಿ, ಜೂ.1: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಆರಕ್ಷಕರು ಜೂ.4ರಂದು ನಡೆಸಲುದ್ದೇಶಿ ಸಿರುವ ಮುಷ್ಕರದ ನಿರ್ಧಾರವನ್ನು ಹಿಂದೆಗೆದುಕೊಳ್ಳಬೇಕು ಹಾಗೂ ರಾಜ್ಯ ಸರಕಾರ ಆರಕ್ಷಕರ ಬೇಡಿಕೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯವನ್ನು ಒದಗಿಸಬೇಕು ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಮನವಿ ಮಾಡಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆರಕ್ಷಕರು ಜೂ.4ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದ ರಕ್ಷಣೆಯ ವಿಶೇಷ ಹೊಣೆ ಹೊತ್ತಿರುವ ಆರಕ್ಷಕರ ಮುಷ್ಕರದಿಂದ ಜನತೆಗೆ ವಿಶೇಷ ತೊಂದರೆಯಾಗುತ್ತದೆ. ಜನರ ದೈನಂದಿನ ವ್ಯವಹಾರ, ರಕ್ಷಣೆ, ಭದ್ರತೆಗಳ ವ್ಯವಸ್ಥೆಗಳೆಲ್ಲವೂ ಅಸ್ತವ್ಯಸ್ತವಾಗುತ್ತದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಆರಕ್ಷಕರು ತಮ್ಮ ನಿರ್ಧಾರವನ್ನು ಬದಲಿಸಿ ಮುಷ್ಕರವನ್ನು ಸ್ಥಗಿತಗೊಳಿಸಬೇಕು. ಬೇಡಿಕೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯವನ್ನು ಒದಗಿಸಬೇಕೆಂದು ಸರಕಾರವನ್ನು ಒತ್ತಾಯಿಸುವುದಾಗಿ ಪೇಜಾವರ ಶ್ರೀ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಿರೂರು ಶ್ರೀ ಬೆಂಬಲ:
ಹಗಲು-ರಾತ್ರಿ ಎನ್ನದೆ ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ಪೊಲೀಸರ ನ್ಯಾಯಸಮ್ಮತ ಬೇಡಿಕೆಗೆ ಬೆಂಬಲ ಸೂಚಿಸಿರುವ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥರು, ಸರಕಾರ ಕೂಡಲೇ ಪೊಲೀಸ್ ಇಲಾಖೆಯ ಬೇಡಿಕೆಗಳಿಗೆ ಸ್ಪಂದಿಸಿ, ರಾಜ್ಯದ ಜನಹಿತ-ಸಾಮಾಜಿಕ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ತುಳುನಾಡ ರಕ್ಷಣಾ ವೇದಿಕೆ: ಕೆಳಹಂತದ ಪೊಲೀಸರ ನ್ಯಾಯ ಯುತ ಬೇಡಿಕೆಗಳಿಗೆ ಹಾಗೂ ಇಲಾಖೆಯ ಆಧುನೀಕರಣಕ್ಕೆ ಸರಕಾರ ಕೂಡಲೇ ಸ್ಪಂದಿಸುವಂತೆ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನ್‌ದಾಸ್ ಶೆಟ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಪೊಲೀಸರ ಪ್ರತಿಭಟನೆಯನ್ನು ವೇದಿಕೆ ಬೆಂಬಲಿಸುತ್ತದೆ ಎಂದವರು ಹೇಳಿದ್ದಾರೆ.







