ಪೊಲೀಸ್ ಸಿಬ್ಬಂದಿಯ ಪ್ರತಿಭಟನೆ; ರಜೆ ಅರ್ಜಿ ಸಲ್ಲಿಸಿದ ಮಾಹಿತಿ ಇಲ್ಲ: ದ.ಕ.ಎಸ್ಪಿ
.gif)
ಮಂಗಳೂರು, ಜೂ.1: ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ದಲ್ಲಿ ಪೊಲೀಸರ ವೇತನ, ಭತ್ತೆಗಳು ಅಷ್ಟೇನು ಕಮ್ಮಿಯಿಲ್ಲ. ಆಗಬೇಕಿರುವ ಸುಧಾರಣೆ ಮತ್ತು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಸರಕಾರದ ಜತೆ ಮಾತುಕತೆ ನಡೆಸುತ್ತಿದ್ದಾರೆ. ತನ್ನ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆ ಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುತ್ತೇನೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸಲಾರರು ಎಂಬ ವಿಶ್ವಾಸ ನನಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಭೂಷಣ್ ಗುಲಾಬರಾವ್ ಬೊರಸೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಪೊಲೀಸರ ಪ್ರತಿಭಟನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾ ವ್ಯಾಪ್ತಿಯ 15 ಠಾಣೆಗಳಲ್ಲಿ ಎಷ್ಟು ಮಂದಿ ರಜೆ ಅರ್ಜಿ ಸಲ್ಲಿಸಿದ್ದಾರೆಂದು ನಿಖರ ಮಾಹಿತಿ ಇಲ್ಲ. ಈ ಬಗ್ಗೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದರು.
ಜೂ.4ರಿಂದ ಗ್ರಾಮಾಂತರ ಪ್ರದೇಶದಲ್ಲೂ ಹೆಲ್ಮೆಟ್ ಕಡ್ಡಾಯ
ಜೂ.4ರ ಬಳಿಕ ಜಿಲ್ಲೆಯ ಗ್ರಾಮಾಂತರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರ ರಿಗೆ ಹೆಲ್ಮೆಟ್ ಪ್ರಯಾಣ ಕಡ್ಡಾಯಗೊಳಿಸಲಾಗುವುದು. ಹೆಲ್ಮೆಟ್‌ರಹಿತ ಪ್ರಯಾಣ ದಿಂದಲೇ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆಯುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಈಗಾಗಲೇ ದಿನವೊಂದಕ್ಕೆ 3-4 ಸಾವು ಪ್ರಕರಣಗಳು ಸಂಭವಿಸುತ್ತಿವೆ. ಮಳೆಗಾಲ ದಲ್ಲಿ ಈ ಪ್ರಕರಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದ್ದು, ಹೆಲ್ಮೆಟ್ ಬಳಕೆ ಕಡ್ಡಾಯ ಗೊಳಿಸಬೇಕಾದ ಅಗತ್ಯವಿದೆ ಎಂದರು.





