ಸಮಸ್ತದ ನೂತನ ಅಧ್ಯಕ್ಷರಾಗಿ ಎ.ಪಿ.ಮುಹಮ್ಮದ್ ಮುಸ್ಲಿಯಾರ್

ಮಂಗಳೂರು, ಜೂ.1: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ನೂತನ ಅಧ್ಯಕ್ಷ ರಾಗಿ ಕುಮರಂಪುತ್ತೂರು ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಬುಧವಾರ ಮಲಪ್ಪುರಂನ ಸಮಸ್ತಾಲಯದಲ್ಲಿ ನಡೆದ ಸಮಸ್ತ ಕೇಂದ್ರ ಸಮಿತಿಯ ಮುಶಾವರ ಸಭೆಯಲ್ಲಿ ಉಪಾಧ್ಯಕ್ಷ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಿದರು.
ಇತ್ತೀಚೆಗೆ ನಿಧನರಾದ ಶೈಖುನಾ ಕೋಯಕುಟ್ಟಿ ಉಸ್ತಾದ್‌ರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರನ್ನಾಗಿ ಸಮಸ್ತ ಕೇರಳ ಮತವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷ ಪಿ.ಕೆ.ಪಿ.ಅಬ್ದುಸ್ಸಲಾಂ ಮುಸ್ಲಿಯಾರ್‌ರನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷರ ಪರಿಚಯ: ಕುಮರಂಪುತ್ತೂರಿನ ಪಳ್ಳಿಕುನ್ನ್ ನಿವಾಸಿಯಾಗಿರುವ ಎ.ಪಿ.ಮುಹಮ್ಮದ್ ಮುಸ್ಲಿಯಾರ್‌ರವರು ‘ಅಂಬಾಡತ್ತ ಕುಟುಂಬ’ ಎಂಬ ಪ್ರಸಿದ್ಧ ಮನೆತನದಲ್ಲಿ ಜನಿಸಿದವರು. ಓರಾಂಪುರಂ, ಮಾಟುಲ್ ತೆಕ್ಕ್, ಕೊಳಪ್ಪರಂಬ್, ಮಣಲಡಿ, ಪಳ್ಳಿಶ್ಶೇರಿ, ನಂದಿ ಆಲತ್ತೂರ್ ಪಡಿ ಪಾಲಕ್ಕಾಡ್ ಜನ್ನತುಲ್ ಉಲೂಂ, ಚೆಮ್ಮಾಡ್, ಮಡವೂರ್, ಕಾರಂದೂರು ಮುಂತಾದೆಡೆ ಗಳಲ್ಲಿ ಮುದರ್ರಿಸರಾಗಿ ಉಸ್ತಾದರು ವರ್ಷಗಟ್ಟಲೆ ದೀನಿ ಸೇವೆಗೈದಿದ್ದಾರೆ. ಪ್ರಸ್ತುತ 15 ವರ್ಷಗಳಿಂದ ಪಟ್ಟಿಕ್ಕಾಡ್ ಜಾಮಿಅಃ ಕಾಲೇಜಿನಲ್ಲಿ ಪ್ರೊಫೆಸರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಮ್ಮಾಡಿನಲ್ಲಿ ಮುದರ್ರಿಸರಾಗಿದ್ದ ವೇಳೆ ಸಮಸ್ತದ ಮುಶಾವರಕ್ಕೆ ಸದಸ್ಯ ರಾಗಿ ಆಯ್ಕೆಯಾಗಿದ್ದರು. ಬಳಿಕ ಎರಡೇ ವರ್ಷದಲ್ಲಿ ಫತ್ವಾ ಕಮಿಟಿಯ ಸದಸ್ಯ ರಾಗಿಯೂ ಆಯ್ಕೆಯಾದರು. ಸಮಸ್ತದ ಮಣ್ಣಾರ್ಕಾಡ್ ತಾಲೂಕಿನ ಪ್ರಥಮ ಕಾರ್ಯದರ್ಶಿಯಾಗುವುದರೊಂದಿಗೆ ಉಸ್ತಾದರು ನಾಯಕತ್ವ ಕ್ಷೇತ್ರದಲ್ಲಿ ಸಕ್ರಿಯರಾಗತೊಡಗಿದರು. ಎಸ್.ಎಂ.ಎಫ್. ಜಿಲ್ಲಾಧ್ಯಕ್ಷರಾಗಿ, ಸಮಸ್ತ ಪಾಲಕ್ಕಾಡ್ ಜಿಲ್ಲಾ ಉಪಾಧ್ಯಕ್ಷ ರಾಗಿ, ಮದ್ರಸ ಮ್ಯಾನೇಜ್‌ಮೆಂಟ್ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಮುಂತಾದ ಕ್ಷೇತ್ರಗಳಲ್ಲಿ ಉನ್ನತ ಪದವಿಯನ್ನು ಅಲಂಕರಿಸಿದ್ದಾರೆ.





