ಚುಟುಕು ಸುದ್ದಿಗಳು
ಕಾಸರಗೋಡು: ಮಳೆಗೆ ಅಪಾರ ಹಾನಿ
ಕಾಸರಗೋಡು, ಜೂ.1: ಜಿಲ್ಲೆಯಲ್ಲಿ ಮಂಗಳವಾರ ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆ ಸುರಿದಿದ್ದು, ಹಲವಡೆ ಅಪಾರ ಹಾನಿ, ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಪೆರ್ಮುದೆ ಬಳಿಯ ಮುನ್ನೂರು ಗುಳಿಂಗಿರಿಯ ಬಶೀರ್ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಉಂಟಾಗಿದ್ದು, ಮನೆಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಮೈನ್ ಸ್ವಿಚ್ ಹಾಗೂ ಸ್ವಿಚ್ ಬೋರ್ಡ್‌ಗಳು ಸ್ಫೋಟಿಸಿ ಉರಿದಿವೆ. ಫ್ಯಾನ್‌ಗಳು ನೆಲಕಚ್ಚಿವೆ. ಗೋಡೆಗಳು ಬಿರುಕುಬಿಟ್ಟಿವೆ. ಲಕ್ಷಾಂತರ ರೂ.ಗಳ ಹಾನಿ ಉಂಟಾಗಿದೆ.
ಕುಂಬಳೆ ಸಮೀಪದ ಬಂಬ್ರಾಣದಲ್ಲಿ ಮೂರು ಮನೆಗಳಿಗೆ ಹಾನಿ ಉಂಟಾಗಿದ್ದು, ಬಂಬ್ರಾಣ ಬತ್ತೇರಿಯ ಅಬ್ದುಲ್ಲ ಮತ್ತು ಬೀಫಾತಿಮ್ಮ ಗಂಭೀರ ಗಾಯಗೊಂಡಿದ್ದಾರೆ.
ಪಿಡಿಒ ಕರ್ತವ್ಯಕ್ಕೆ ಅಡ್ಡಿ: ದೂರು
ಕಾಪು, ಜೂ.1: ಅರ್ಜಿ ಸಲ್ಲಿಕೆ ವಿಚಾರದಲ್ಲಿ ಉದ್ಯಾವರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 31ರಂದು ಮೋಹನ್ ಸಾಲಿಯಾನ್ ಎಂಬವರು 11 ಎ ಕೋರಿ ಅರ್ಜಿ ಸಲ್ಲಿಸಿದ್ದು, ಅದರ ಸಂಬಂಧ 11 ಬಿಯಲ್ಲಿ ಪೂರಕ ದಾಖಲೆಯೊಂದಿಗೆ ಅರ್ಜಿ ಸಲ್ಲಿಸುವಂತೆ ಪಿಡಿಒ ಸೂಚಿಸಿದ್ದರು. ಆದರೆ ಮೋಹನ್ ಏಕಾಏಕಿ ಅರ್ಜಿಯನ್ನು ಪಡೆಯಬೇಕೆಂದು ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಯುಂಟು ಮಾಡಿ, ಬೆದರಿಕೆಯೊಡ್ಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ಕಂದಾಯ ಸಮಸ್ಯೆ: ಸಾರ್ವಜನಿಕ ಅಹವಾಲು ಸ್ವೀಕಾರ
ಮಂಗಳೂರು, ಜೂ.1: ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯವರು ದ.ಕ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜೂ.3ರಂದು ಅಪರಾಹ್ನ 3ರಿಂದ 5ರವರೆಗೆ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಜೂ. 4 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ದ.ಕ. ಜಿಲ್ಲೆಯ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಅಪರಾಹ್ನ 3ರಿಂದ ಬೆಳ್ತಂಗಡಿ ತಾಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲು ಸ್ವೀಕಾರ ಮಾಡಲಿರುವರು. ಸಂಜೆ 6 ಗಂಟೆಗೆ ಬೆಳ್ತಂಗಡಿಯಿಂದ ಹೊರಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಸಾವಯವ ಕೃಷಿಕರ ಸಂಘಗಳ ಒಕ್ಕೂಟಕ್ಕೆ ಆಯ್ಕೆ
ಮಂಗಳೂರು, ಜೂ. 1: ದ.ಕ., ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಪ್ರಾಂತೀಯ ಸಾವಯವ ಕೃಷಿಕರ ಒಕ್ಕೂಟಗಳ ಸಂಘ ನಿಯಮಿತ ಮಂಗಳೂರು ಇದರ ಆಡಳಿತ ಮಂಡಳಿ ನಿರ್ದೇಶಕರ 11 ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು. 11 ಸ್ಥಾನಗಳಿಗೆ 12 ಮಂದಿ ಕಣದಲ್ಲಿದ್ದರು. ಅನಂತ ಆರ್.ಬಿ. ಚಿಕ್ಕಮಗಳೂರು, ಅನಿಲ್‌ರಾಜ್ ಡಿ .ಎಂ. ಚಿಕ್ಕಮಗಳೂರು, ತಿಮ್ಮಣ್ಣ ಹೆಗಡೆ ಕುಂದಾಪುರ, ದೇವದಾಸ್ ಹೆಬ್ಬಾರ್ ಉಡುಪಿ, ದೇವದಾಸ ರೈ ಪುತ್ತೂರು, ಪ್ರಭಾಕರ ಮಯ್ಯ ಬೆಳ್ತಂಗಡಿ, ಪ್ರಶಾಂತ ಗಟ್ಟಿ ಮಂಗಳೂರು, ಬಿ.ಎಂ. ಮುತ್ತು ಗೌಡ ಮೂಡಿಗೆರೆ, ವಿಕ್ಟರ್ ರಾಡ್ರಿಗಸ್ ಬಂಟ್ವಾಳ, ಶಿವಶಂಕರ ಶೃಂಗೇರಿ, ಜಿ.ಟಿ.ಶ್ರೀನಿವಾಸ ತರೀಕೆರೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಜೂ.4: ಮಳೆ ನೀರು ಕೊಯ್ಲು ಕುರಿತು ಮಾಹಿತಿ
ಮಣಿಪಾಲ ಜೂ. 1: ಜೀವಜಲ ನೀರಿನ ಪ್ರಾಮುಖ್ಯತೆಯನ್ನು ಅರಿತು ಅದರ ನೈರ್ಮಲ್ಯ, ಸಂರಕ್ಷಣೆ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂ.4ರಂದು ಮಳೆ ನೀರು ಕೊಯ್ಲು ವಿಷಯದ ಬಗ್ಗೆ ಒಂದು ದಿನದ ಮಾಹಿತಿಕಾರ್ಯಾಗಾರವನ್ನು ಮಣಿಪಾಲದಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಆಯೋಜಿಸಲಾಗಿದೆ. ಆಸಕ್ತರು ತಮ್ಮ ಹೆಸರುಗಳನ್ನು (ದೂ.ಸಂ:0820-2570263) ನೋಂದಾಯಿಸಿಕೊಳ್ಳಬಹುದು ಎಂದು ಭಾರತೀಯ ವಿಕಾಸ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.
ಸುಳ್ಯ: ಜಾಗೃತಿ ಆಂದೋಲನ ಸಮಿತಿ ರಚನೆ
ಸುಳ್ಯ, ಜೂ.1: ಶಾಲೆಗೆ ಹೋಗದ ಮತ್ತು ಶಾಲೆಯಿಂದ ಹೊರಗುಳಿದಿರುವ 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ‘ಶಾಲೆ ಕಡೆ ನನ್ನ ನಡೆ’, ‘ಶಿಕ್ಷಣ ನನ್ನ ಮೂಲಭೂತ ಹಕ್ಕು’ ಎಂಬ ವಿನೂತನ ಜಾಗೃತಿ ಜನಾಂದೋಲನಕ್ಕೆ ಸುಳ್ಯ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ನಗರ ಮಟ್ಟದ ಸಮಿತಿ ರಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾಗಿ ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಕಾರ್ಯದರ್ಶಿಯಾಗಿ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಮತ್ತು ಸದಸ್ಯರುಗಳಾಗಿ ನಪಂನ ಎಲ್ಲ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಂಗನವಾಡಿ ಸಹಾಯಕಿಯರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಶಾಲೆ ಬಿಟ್ಟ ಮಕ್ಕಳ ಪತ್ತೆ, ಊರಿನಲ್ಲಿ ತಂಗಿದ್ದ ಅಲೆಮಾರಿಗಳ ಮಕ್ಕಳ ವಿವರ ಪಡೆಯಲು ಹಾಗೂ ಲೋಕೋಪಯೋಗಿ ಕಚೇರಿಯ ಬಳಿ, ಪ್ರಭು ಗ್ರೌಂಡ್, ಕೆಎಸ್ಸಾರ್ಟಿಸಿ ಎದುರಿನ ರಸ್ತೆ, ವಸತಿ ನಿಲಯಗಳ ಬಳಿ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಇಟ್ಟು ಅವರ ಮೇಲೆ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು. ಸದಸ್ಯರುಗಳಾದ ಗೋಪಾಲ ನಡುಬೈಲು, ಪ್ರೇಮಾ ಟೀಚರ್, ಸುನೀತಾ ಮೊಂತೆರೊ, ಗಿರೀಶ್ ಕಲ್ಲುಗದ್ದೆ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಥಮ ದರ್ಜೆ ಸಹಾಯಕ ಧನಂಜಯ ರೈ ಕಲಾಪ ನಡೆಸಿಕೊಟ್ಟರು.
ಅಕ್ರಮ ಸಾಗಾಟ: ಜಾನುವಾರು ವಶ
ಕೋಟ, ಜೂ.1: ಕೆದೂರು ಗ್ರಾಮದ ಗೋಳಿಬೆಟ್ಟು ಎಂಬಲ್ಲಿ ಬುಧವಾರ ಬೆಳಗಿನ ಜಾವ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಜಾನುವಾರುಗಳನ್ನು ಕೋಟ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಗಸ್ತು ತಿರುಗುವ ವೇಳೆ ಗೋಳಿಬೆಟ್ಟು ಎಂಬಲ್ಲಿ ನಿಂತಿದ್ದ ವಾಹನವನ್ನು ತಪಾಸಣೆ ಮಾಡುವಾಗ ಅದರಲ್ಲಿದ್ದ ನಾಲ್ವರು ಪರಾರಿಯಾದರು. ನಂತರ ವಾಹನವನ್ನು ಪರಿಶೀಲಿಸಿ 6 ಜಾನುವಾರುಗಳನ್ನು ವಶಪಡಿಸಿಕೊಂಡರು. ಪರಾರಿಯಾದವರು ನಾಗರಾಜ್ ನಾಯ್ಕ ಹಾಗೂ ಇತರರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಉಡುಪಿ, ಜೂ.1: ಸಂತೆಕಟ್ಟೆಯಲ್ಲಿರುವ ಬಾಬಾ ಸೋಡಾ ಫ್ಯಾಕ್ಟರಿಯಲ್ಲಿ ಚಾಲಕನಾಗಿದ್ದ ಕೊಪ್ಪನಿವಾಸಿ ಆನಂದ (49) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಮಂಗಳವಾರ ರಾತ್ರಿ ಫ್ಯಾಕ್ಟರಿಯ ಶೆಡ್ಡಿನ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. *ಕುಂದಾಪುರ: ವೈಯಕ್ತಿಕ ಕಾರಣದಿಂದ ಮನನೊಂದ ಕುಂದಾಪುರ ಮೀನು ಮಾರುಕಟ್ಟೆ ರಸ್ತೆಯ ಶೇಖರ ಪೂಜಾರಿ (49) ಮಂಗಳವಾರ ಆನಗಳ್ಳಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಚಿನ್ನಾಭರಣ ಕಳವು
ಕಾಸರಗೋಡು, ಜೂ.1: ಮುಳ್ಳೇರಿಯಾದಿಂದ ಬದಿಯಡ್ಕಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಹತ್ತು ಪವನ್ ಚಿನ್ನಾಭರಣ ಕಳವಾದ ಘಟನೆ ಬುಧವಾರ ಬೆಳಗ್ಗೆ ಬದಿಯಡ್ಕದಲ್ಲಿ ನಡೆದಿದೆ. ಮುಳ್ಳೇರಿಯ ಅಡ್ಕದ ರೇಖಾ ಚಿನ್ನಾಭರಣ ಕಳಕೊಂಡವರು. ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ತನ್ನ ಮಗುವಿನ ಜೊತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದ್ದು, ಬದಿಯಡ್ಕಕ್ಕೆ ತಲುಪಿದಾಗ ಚಿನ್ನಾಭರಣ ಕಳವಾಗಿರುವುದು ರೇಖಾರ ಗಮನಕ್ಕೆ ಬಂದಿದೆ. ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಮಹಿಳೆಯ ಚಿನ್ನಾಭರಣ ಕಳವು
ಕಾಸರಗೋಡು, ಜೂ.1: ಮುಳ್ಳೇರಿಯಾದಿಂದ ಬದಿಯಡ್ಕಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಹತ್ತು ಪವನ್ ಚಿನ್ನಾಭರಣ ಕಳವಾದ ಘಟನೆ ಬುಧವಾರ ಬೆಳಗ್ಗೆ ಬದಿಯಡ್ಕದಲ್ಲಿ ನಡೆದಿದೆ. ಮುಳ್ಳೇರಿಯ ಅಡ್ಕದ ರೇಖಾ ಚಿನ್ನಾಭರಣ ಕಳಕೊಂಡವರು. ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ತನ್ನ ಮಗುವಿನ ಜೊತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದ್ದು, ಬದಿಯಡ್ಕಕ್ಕೆ ತಲುಪಿದಾಗ ಚಿನ್ನಾಭರಣ ಕಳವಾಗಿರುವುದು ರೇಖಾರ ಗಮನಕ್ಕೆ ಬಂದಿದೆ. ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಅಕ್ರಮ ಗಾಂಜಾ ಮಾರಾಟ: ಇಬ್ಬರ ಸೆರೆ
ಉಡುಪಿ, ಜೂ.1: ಅಲೆವೂರು ಗ್ರಾಮದ ವಿಠಲ್ ಸಭಾಭವನ ಕ್ರಾಸ್ ಬಳಿ ಬುಧವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಿರ್ವ ತೊಟ್ಲಗುರಿ ನಿವಾಸಿ ಮುಹಮ್ಮದ್ ಅಝರುದ್ದೀನ್ (29) ಹಾಗೂ ಉಚ್ಚಿಲದ ಸುಧೀರ್ ದೇವಾಡಿಗ (28) ಎಂದು ಗುರುತಿಸಲಾಗಿದೆ. ಇವರಿಂದ 950 ಗ್ರಾಂ ತೂಕದ 15,000ರೂ. ವೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹಾಗೂ ಸೊತ್ತುಗಳನ್ನು ಮಣಿಪಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.







