ಆರೋಪ-ಪ್ರತ್ಯಾರೋಪ ಎಲ್ಲಿಯವರೆಗೆ ಈ ಕಣ್ಣು ಮುಚ್ಚಾಲೆ?

ಜನರ ಮೇಲೆ ಹೊಸ ಹೊಸ ತೆರಿಗೆಗಳನ್ನು ಘೋಷಿಸುವುದಕ್ಕಾಗಿಯೇ ಸರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ದೈನಂದಿನ ಬಳಕೆಯ ವಸ್ತುಗಳ ಮೇಲೆ ವಿಧಿಸುವ ಸಂದರ್ಭದಲ್ಲಿ ಸರಕಾರ ಒಂದಿಷ್ಟು ಅಳುಕನ್ನು ವ್ಯಕ್ತಪಡಿಸುತ್ತಿಲ್ಲ. ಜನಸಾಮಾನ್ಯರ ಬದುಕು ದುಬಾರಿಯಾಗುತ್ತಿದೆ. ಇವೆಲ್ಲದರ ವಿರುದ್ಧ ಮಾತನಾಡಬೇಕಾದ ಕಾಂಗ್ರೆಸ್ ಧ್ವನಿಕಳೆದುಕೊಂಡಂತೆ ವರ್ತಿಸುತ್ತಿದೆ. ಜನಸಾಮಾನ್ಯರ ಬದುಕು ನರಕಸದೃಶವಾಗುತ್ತಿರುವ ಸಂದರ್ಭದಲ್ಲಿ ವೌನವಾಗಿರುವ ಸೋನಿಯಾ ಬಳಗ, ತನ್ನ ಕುಟುಂಬದ ತಂಟೆಗೆ ಬಂದಾಗ ಮಾತ್ರ ಬೀದಿಯಲ್ಲಿ ನಿಂತು ಅಬ್ಬರಿಸುವುದು ಅಚ್ಚರಿಯೆನಿಸುತ್ತಿದೆ. ಎರಡು ದಿನಗಳ ಹಿಂದೆ, ಸೋನಿಯಾ ಗಾಂಧಿಯವರು ನರೇಂದ್ರ ಮೋದಿಯ ವಿರುದ್ಧ ತೀವ್ರ ದಾಳಿ ನಡೆಸಿದರು. ಈ ದಾಳಿ ಈ ದೇಶದ ಜನರ ಪರವಾಗಿ ಆಗಿರಲಿಲ್ಲ. ತನ್ನ ಅಳಿಯನ ಮೇಲೆ ಬಿಜೆಪಿ ಸುಳ್ಳಾರೋಪ ಮಾಡುತ್ತಿದೆ ಎನ್ನುವುದಷ್ಟೇ ಅವರ ದುಃಖವಾಗಿತ್ತು. ಇಂದು ದೇಶದ ಜನರ ದುಃಖವಂತೂ ಅಲ್ಲ. ತನ್ನ ಅಳಿಯನ ವಿರುದ್ಧ, ಮಗನ ವಿರುದ್ಧ ಮೋದಿ ಸರಕಾರ ಟೀಕೆಗಳು, ಆರೋಪಗಳನ್ನು ಮಾಡಿದಾಗ ರಣಾರಂಪ ಮಾಡುವ ಸೋನಿಯಾಗಾಂಧಿಯವರು, ಈ ದೇಶದ ಶ್ರೀಸಾಮಾನ್ಯನಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾಕೆ ವೌನ ತಾಳಿದ್ದಾರೆ? ಇತ್ತೀಚೆಗೆ ಕೇಜ್ರಿವಾಲ್ ಅವರು ಹೇಳಿರುವಂತೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಳ ಒಪ್ಪಂದವೇನಾದರೂ ನಡೆದಿದೆಯೆ?
ರಾಬರ್ಟ್ ವಾದ್ರಾ ಮಾಡಿರುವ ಭ್ರಷ್ಟಾಚಾರಗಳ ಕುರಿತಂತೆ ಮೋದಿ ಸರಕಾರ ್ಚಮಾತನಾಡುತ್ತಾ ಬಂದಿರುವುದು ಇಂದು ನಿನ್ನೆಯಲ್ಲ. ಕಳೆದ ಎರಡು ವರ್ಷಗಳಿಂದ ಮೋದಿ ಮತ್ತು ಅವರ ತಂಡ ವಾದ್ರ್ರಾರರನ್ನು ಗುರಿಯಾಗಿಟ್ಟುಕೊಂಡು, ಹೇಳಿಕೆಗಳನ್ನು ನೀಡುತ್ತಿವೆ. ಸರಕಾರದ ವಿರುದ್ಧ ವಿರೋಧ ಪಕ್ಷಗಳ ಧ್ವನಿ ಒಂದಿಷ್ಟು ಎತ್ತರಿಸಿದಾಕ್ಷಣ, ವಾದ್ರಾ ಹಗರಣಗಳ ತನಿಖೆಯ ಬೆದರಿಕೆಯನ್ನು ಒಡ್ಡುತ್ತದೆ ಮೋದಿ ಸರಕಾರ. ಸೋನಿಯಾಗಾಂಧಿ ಅಥವಾ ರಾಹುಲ್‌ಗಾಂಧಿಯ ವಿರುದ್ಧ ಸದಾ ತನ್ನ ಬತ್ತಳಿಕೆಯಲ್ಲಿ ವಾದ್ರಾರನ್ನು ಒಂದು ಅಸ್ತ್ರವಾಗಿಟ್ಟುಕೊಂಡು ಆಗಾಗ ಅದನ್ನು ತೆಗೆದು ತೋರಿಸಿ, ಬೆದರಿಸುತ್ತಾ ಬಂದಿದೆ. ಜನರೋ, ಈ ಬಾಣವನ್ನು ಈಗ ಪ್ರಯೋಗಿಸುತ್ತಾರೆ ಎಂದು ಕಾದು ಕುಳಿತದ್ದೇ ಬಂತು. ಮಾಧ್ಯಮಗಳೂ ಅಷ್ಟೇ. ವಾದ್ರಾ ಹಗರಗಣಗಳ ಕುರಿತಂತೆ ಮುಖ ಪುಟದಲ್ಲಿ ಸುದ್ದಿ ಮಾಡಿ ಗದ್ದಲ ಎಬ್ಬಿಸುತ್ತವೆ. ಇನ್ನೇನು ರಾಬರ್ಟ್ ವಾದ್ರಾ ಅವರ ಬಂಧನವಾಗಿಯೇ ಬಿಟ್ಟಿತು ಎಂದು ಜನರು ನಂಬುವಂತೆ ಚರ್ಚೆಗಳು ನಡೆಯುತ್ತವೆ. ಕೆಲ ದಿನಗಳ ಬಳಿಕ ವಾದ್ರಾ ಹೆಸರು ಬದಿಗೆ ಸರಿಯಲ್ಪಡುತ್ತದೆ. ಕೆಲ ದಿನಗಳಿಂದ ಮತ್ತೆ ಬಿಜೆಪಿ ವಾದ್ರಾ ಮಂತ್ರವನ್ನು ಪಠಿಸುತ್ತಿದೆ. ಮತ್ತು ಅದಕ್ಕೆ ಸೋನಿಯಾಗಾಂಧಿ ಬಿರುಸಿನ ಪ್ರತಿ ಟೀಕೆಗಳನ್ನೂ ಮಾಡುತ್ತಿದ್ದಾರೆ. ಆದರೆ ಟೀಕೆ-ಪ್ರತಿ ಟೀಕೆಗಳಿಂದ ಈ ದೇಶದ ಜನರಿಗೆ ಯಾವ ಲಾಭಗಳೂ ಆಗುತ್ತಿಲ್ಲ. ಬರೇ ಸದ್ದುಗಳು, ಗಲಾಟೆಗಳಿಂದ ವಾದ್ರಾ ಅಕ್ರಮಗಳಿಗೆ ಶಿಕ್ಷೆಯಾದಂತೆಯೂ ಆಗುವುದಿಲ್ಲ. ಏನೋ ನಡೆಯುತ್ತಿದೆ ಎನ್ನುವ ಭ್ರಮೆಯನ್ನು ಸೃಷ್ಟಿಸಿ ಅತ್ತ ಕಾಂಗ್ರೆಸ್ ಮತ್ತು ಇತ್ತ ಬಿಜೆಪಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದೆ. ಈ ದೇಶದ ಪ್ರಜೆಗಳನ್ನು ಉಭಯ ಪಕ್ಷಗಳು ಮೋಸ ಮಾಡುತ್ತಿವೆ.
ಕೇಂದ್ರ ಸರಕಾರಕ್ಕೆ ಈ ದೇಶ ಕೇಳುವ ಪ್ರಶ್ನೆ ಒಂದೇ. ಗಾಂಧಿ ಕುಟುಂಬ ಹಗರಣಗಳಲ್ಲಿ ಶಾಮೀಲಾಗಿರುವುದು ನಿಜವೇ ಆಗಿದ್ದರೆ, ಅವರು ಇನ್ನೂ ಯಾಕೆ ಮುಕ್ತವಾಗಿ ಓಡಾಡುತ್ತಿದ್ದಾರ್ಕ? ತಮ್ಮದೇ ಸರಕಾರವಿದೆ. ವಾದ್ರಾ ಕುರಿತಂತೆ ತನಿಖೆ ನಡೆಸಿ, ಅವರ ಮೇಲೆ ಪ್ರಕರಣಗಳನ್ನು ದಾಖಲಿಸಬಹುದಲ್ಲ. ಇನ್ನೂ ಯಾಕೆ ಸರಕಾರ ಮೀನಾಮೇಷ ಎಣಿಸುತ್ತಿದೆ. ಬಿಜೆಪಿ ಅಧಿಕಾರಕ್ಕೇರುವ ಮುನ್ನವೇ ವಾದ್ರಾರನ್ನು ಗುರಿಯಾಗಿಸಿ ಸೋನಿಯಾರನ್ನು ಮಣಿಸಲು ನೋಡುತ್ತಿತ್ತು. ಈ ನಿಟ್ಟಿನಲ್ಲಿ ನೋಡಿದರೆ, ಅಧಿಕಾರ ಹಿಡಿದು ಎರಡು ವರ್ಷ ಮುಗಿಸುವಷ್ಟರಲ್ಲಿ ವಾದ್ರಾಜೈಲಲ್ಲಿರಬೇಕಾಗಿತ್ತು. ಆದರೆ ಅಂತಹದ್ಯಾವುದೂ ಸಂಭವಿಸಿಲ್ಲ ಯಾಕೆ?ಪರಾಬರ್ಟ್ ವಾದ್ರಾ ಸಹಿತ ಗಾಂಧಿ ಕುಟುಂಬದ ಎಲ್ಲರೂ ಯಾವ ಅಡೆ ತಡೆಯೂ ಇಲ್ಲದೇ ತಮ್ಮ ವ್ಯವಹಾರ ನಡೆಸುತ್ತಲೇ ಇದ್ದಾರೆ ಯಾಕೆ? ಇಲ್ಲಿ ವಾದ್ರಾರನ್ನು ಮುಂದಿಟ್ಟು ಬಿಜೆಪಿ ರಾಜಕೀಯ ಆಟಗಳನ್ನು ಆಡುತ್ತಿದೆ. ಬಿಜೆಪಿ ವಾದ್ರಾ ಪ್ರಕರಣವನ್ನು ಇಟ್ಟುಕೊಂಡು ಎರಡೆರಡು ಹಕ್ಕಿಗಳನ್ನು ಹೊಡೆಯಲು ನೋಡುತ್ತಿದೆ. ಎರಡು ವರ್ಷಗಳಲ್ಲಿ ಬಿಜೆಪಿ ಸರಕಾರ ನಡೆಸಿದ ಭ್ರಷ್ಟಾಚಾರಗಳು ಒಂದೆರಡಲ್ಲ. ಲಲಿತ್ ಮೋದಿ ಹಗರದಲ್ಲಿ ಬಿಜೆಪಿಯ ನಾಯಕರು ಹೊಂದಿರುವ ಹತ್ತಿರದ ನಂಟೇ, ಸರಕಾರವನ್ನು ಬುಡಮೇಲುಗೊಳಿಸಲು ಸಾಕಿತ್ತು. ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಇಷ್ಟರಲ್ಲೇ ರಾಜೀನಾಮೆಯನ್ನು ನೀಡಬೇಕಾಗಿತ್ತು. ನರೇಂದ್ರ ಮೋದಿಯ ನಕಲಿ ಪದವಿ, ಸ್ಮತಿ ಇರಾನಿಯ ಮೇಲಿರುವ ಆರೋಪಗಳು, ಜೇಟ್ಲಿ, ವಸುಂಧರಾರಾಜೆಯವರ ಅಕ್ರಮಗಳು ಹೀಗೆ ಒಂದೇ ಎರಡೇ? ಆದರೆ ವಿರೋಧ ಪಕ್ಷಗಳ ತೀವ್ರ ಒತ್ತಡ, ಪ್ರತಿಭಟನೆಗಳಿಲ್ಲದ ಕಾರಣದಿಂದಲೇ ಎಲ್ಲ ಹಗರಣಗಳಿಂದಲೂ ಕೇಂದ್ರ ಸರಕಾರ ಬಚಾವಾಗುತ್ತಾ ಬರುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಂದು ಒಳ ಒಪ್ಪಂದ ನಡೆದಿರುವುದರಿಂದಲೇ ಕಾಂಗ್ರೆಸ್ ಪಕ್ಷ ಬಿಜೆಪಿಯ ಅಕ್ರಮಗಳಿಗೆ ಮೃದುವಾಗಿ ಸ್ಪಂದಿಸುತ್ತಿದೆ. ಅಂದರೆ ಕಾಂಗ್ರೆಸ್ ಅಕ್ರಮಗಳನ್ನು ಮುಂದಿಟ್ಟುಕೊಂಡು ಬಿಜೆಪಿನಾಯಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ. ಅಂದರೆ, ನೀವು ತುಸು ಬಾಯಿ ಮುಚ್ಚಿ ಕೂತರೆ, ನಾವೂ ಬಾಯಿ ಮುಚ್ಚಿ ಕೂರುತ್ತೇವೆ ಎನ್ನುವ ತಂತ್ರ. ನೀವು ನಮ್ಮನ್ನು ಜಾಲಾಡಿದರೆ, ನಾವು ವಾದ್ರಾ ಪ್ರಕರಣಗಳನ್ನು ತನಿಖೆ ಮಾಡಿ ಜೈಲಿಗೆ ತಳ್ಳುತ್ತೇವೆ ಎಂಬ ಬ್ಲಾಕ್‌ಮೇಲ್ ತಂತ್ರ. ಮಗದೊಂದೆಡೆ, ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕಿಳಿದರೆ ವಾದ್ರರನ್ನು ಮುಂದಿಟ್ಟು ಅವರನ್ನು ಮಟ್ಟ ಹಾಕುವ ಯೋಚನೆಯನ್ನೂ ಬಿಜೆಪಿ ಮಾಡುತ್ತಿದೆ.
ಆದುದರಿಂದಲೇ ವಾದ್ರಾ ಭ್ರಷ್ಟಾಚಾರಗೈದಿರುವುದಕ್ಕಿಂತಲೂ, ಆ ಭ್ರಷ್ಟಾಚಾರದಿಂದ ನಾವೆಷ್ಟು ರಾಜಕೀಯ ಲಾಭ ಮಾಡಬಹುದು ಎಂಬುದನ್ನು ಬಿಜೆಪಿ ಲೆಕ್ಕ ಹಾಕುತ್ತಿದೆ. ಆದುದರಿಂದಲೇ ವಾದ್ರಾ ಕಾನೂನಿಂದ ನುಣುಚಿಕೊಳ್ಳುತ್ತಿದ್ದಾರೆ. ಅಥವಾ ವಾದ್ರಾ ಅವರನ್ನು ಜೈಲಿಗೆ ತಳ್ಳುವಂತಹ ಸಾಕ್ಷ ಬಿಜೆಪಿ ಬಳಿ ಇಲ್ಲ ಎಂದು ದೇಶದ ಜನರು ತಿಳಿದುಕೊಳ್ಳಬೇಕಾಗುತ್ತದೆ. ಬಿಜೆಪಿ ಬರೇ ಡಬ್ಬಾ ಬಡಿಯುತ್ತಿದೆ. ಅದರ ಬಳಿ ಸಾಕ್ಷವಿದ್ದರೆ ನ್ಯಾಯಾಲಯಕ್ಕೆ ಯಾಕೆ ತೆರಳುತ್ತಿಲ್ಲ ಎಂಬ ಪ್ರಶ್ನೆಗೆ ಬಿಜೆಪಿ ನಾಯಕರೇ ಉತ್ತರಿಸಬೇಕಾಗುತ್ತದೆ.ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿರುವುದೇ ಕಾಂಗ್ರೆಸ್‌ನ ಭ್ರಷ್ಟಾಚಾರದ ಕಡೆಗೆ ಕೈ ತೋರಿಸಿ. ಅದು ನಿಜವೇ ಆಗಿದ್ದರೆ, ಆ ಕುರಿತಂತೆ ಬಿಜೆಪಿ ಸರಕಾರದ ಬಳಿ ಸಾಕ್ಷಗಳಿದ್ದರೆ ತಕ್ಷಣ ಅದನ್ನು ನ್ಯಾಯಾಲಯದ ಮುಂದಿಡುವುದು ಬಿಜೆಪಿಯ ಕರ್ತವ್ಯವಾಗಿದೆ. ಲಂಡನ್‌ನಲ್ಲಿ ವಾದ್ರಾ ಬೇನಾಮಿ ಆಸ್ತಿ, ವಿವಾದಾತ್ಮಕ ಶಸ್ತ್ರಾಸ್ತ ಡೀಲರ್‌ಗಳ ಜೊತೆಗಿನ ವ್ಯವಹಾರ, ಅಗಸ್ಟಾ ವೆಸ್ಟ್‌ಲೇಂಡ್ ಹಗರಣ ಇವೆಲ್ಲವನ್ನೂ ಬಿಜೆಪಿ ಸರಿಯಾದ ದಾರಿಯಲ್ಲಿ ನಿರ್ವಹಿಸುತ್ತಿಲ್ಲ. ಬರೇ ಟೀಕೆ, ಆರೋಪಗಳನ್ನೇ ಮಾಡುತ್ತಾ ಹೋದರೆ, ಅದನ್ನು ದೇಶವೂ ನಂಬಬೇಕು ಎಂದಿಲ್ಲ.
ಈ ನಿಟ್ಟಿನಲ್ಲಿ ಸೋನಿಯಾಗಾಂಧಿಯವರು ನರೇಂದ್ರ ಮೋದಿಯವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ರಾಬರ್ಟ್ ವಾದ್ರಾ ಅವರ ಲಂಡನ್ ಆಸ್ತಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಸೋನಿಯಾ, ಯಾವುದೇ ತಪ್ಪಾಗಿದ್ದರೆ ತನಿಖೆಯಾಗಲಿ. ಹಾಲನ್ನು ಹಾಲು ಮಾಡಿ, ನೀರನ್ನು ನೀರು ಮಾಡಿ ಎಂದು ಪ್ರತಿಕ್ರಿಯಿಸಿದ್ದರು. ಇದು ವಾದ್ರಾ ಪ್ರಕರಣಕ್ಕೆ ಮಾತ್ರವಲ್ಲ, ಗಾಂಧಿ ಕುಟುಂಬದ ಮೇಲಿರುವ ಎಲ್ಲಾ ಆರೋಪಗಳಿಗೂ ಅನ್ವಯವಾಗಲಿ. ತಪ್ಪು ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವರಾದರೂ ಅವರಿಗೆ ಶಿಕ್ಷೆಯಾಗಲೇ ಬೇಕು. ಸೋನಿಯಾಗಾಂಧಿಯ ಸವಾಲಿಗೆ ಮೋದಿಯ ಪ್ರತಿಕ್ರಿಯೆಯೇನು ಎನ್ನುವುದನ್ನು ತಿಳಿಯಲು ದೇಶ ಕಾತರದಲ್ಲಿದೆ.







