ಪೊಲಿಟಿಕಲ್ ಸಯನ್ಸ್ ಎಂದರೆ ಅಡುಗೆ ಕಲೆ ಎಂದ ಟಾಪರ್!
ಬಿಹಾರದ 12ನೆ ತರಗತಿಯ 13 ಟಾಪರ್ಗಳಿಗೆ ಮರುಪರೀಕ್ಷೆ
![ಪೊಲಿಟಿಕಲ್ ಸಯನ್ಸ್ ಎಂದರೆ ಅಡುಗೆ ಕಲೆ ಎಂದ ಟಾಪರ್! ಪೊಲಿಟಿಕಲ್ ಸಯನ್ಸ್ ಎಂದರೆ ಅಡುಗೆ ಕಲೆ ಎಂದ ಟಾಪರ್!](https://www.varthabharati.in/sites/default/files/images/articles/2016/06/2/exm.jpg)
ಪಾಟ್ನಾ, ಜೂ.2: ಪೊಲಿಟಿಕಲ್ ಸಯನ್ಸ್ ಎಂದರೆ ಅಡುಗೆ ಕಲೆಯಂತೆ. ಹೀಗೆ ಹೇಳಿರುವುದು ಅನಕ್ಷರಸ್ಥರಲ್ಲ. ಬಿಹಾರ ಶಾಲಾ ಪರೀಕ್ಷಾ ಮಂಡಳಿ (ಬಿಎಸ್ಇಬಿ) 12ನೆ ತರಗತಿ ಪರೀಕ್ಷೆಯಲ್ಲಿ ಟಾಪರ್ ಹುಡುಗಿ. ಇದರಿಂದ ಎಚ್ಚೆತ್ತುಕೊಂಡಿರುವ ಬಿಎಸ್ಇಬಿ ಆತ್ಮಾವಲೋಕನಕ್ಕೆ ಮುಂದಾಗಿದ್ದು, ಈ ವಿದ್ಯಾರ್ಥಿಗಳು ಅಗ್ರಸ್ಥಾನಕ್ಕೆ ಅರ್ಹರೇ ಎಂದು ಮರುಪರಿಶೀಲಿಸುವ ಸಲುವಾಗಿ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ.
ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಲ್ಲಿ 14 ಮಂದಿ ಟಾಪರ್ಗಳಿಗೆ ಜೂನ್ 3ರಂದು ಕಿರು ಮರುಪರೀಕ್ಷೆ ನಡೆಸಲು ಮಂಡಳಿ ನಿರ್ಧರಿಸಿದೆ. ಟಾಪರ್ ರೂಬಿ ರೇ ಎಂಬ ಬಾಲಕಿ ರಾಜಕೀಯ ವಿಜ್ಞಾನವನ್ನು ಅಡುಗೆ ವಿಜ್ಞಾನ ಎಂದು ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ನಂತೆ ಹರಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮಂಡಳಿ ಮುಂದಾಗಿದೆ.
ಈ ಬಾಲಕಿ ಪೊಲಿಟಿಕಲ್ ಸಯನ್ಸ್ನಲ್ಲಿ 100ರಲ್ಲಿ 91 ಅಂಕ ಪಡೆದಿದ್ದಾಳೆ. 500ರಲ್ಲಿ 444 ಅಂಕ ಸಿಕ್ಕಿದ್ದು, ಗರಿಷ್ಠ ಅಂಕ ಪಡೆದ ವಿಷಯದ ಬಗ್ಗೆಯೂ ಸಮರ್ಪಕ ಜ್ಞಾಣ ಇಲ್ಲ. ಟಿವಿ ಚಾನಲ್ ಒಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕುಟುಂಬದವರೊಬ್ಬರು ಆಕೆಗೆ ತಿವಿದಾಗ, ಅದು 600 ಅಂಕ ಎಂದು ಹೇಳಿದಳು.
ವಿಜ್ಞಾನ ವಿಷಯದ ಟಾಪರ್ ಸೌರವ್ ಶ್ರೇಷ್ಠ ಕೂಡಾ ಮೂಲಭೂತ ಪ್ರಶ್ನೆಗೂ ಸರಿ ಉತ್ತರ ನೀಡಲಿಲ್ಲ. ಅಲ್ಯೂಮಿನಿಯಂ ಸಕ್ರಿಯ ಲೋಕ ಎಂದು ಆತ ಹೇಳಿದ. ಸೋಡಿಯಂ ಹಾಗೂ ಎಲೆಕ್ಟ್ರಾನ್ ಬಗ್ಗೆ ಕೂಡಾ ಆತನಿಗೆ ಮಾಹಿತಿ ಇರಲಿಲ್ಲ. ಈ ವಿದ್ಯಾರ್ಥಿಗಳಿಗೆ ಮತ್ತೊಂದು ಕಿರು ಪರೀಕ್ಷೆ ಹಾಗೂ ಮೌಖಿಕ ಸಂದರ್ಶನ ಏರ್ಪಡಿಸಿ, ಅದರಲ್ಲಿ ಅನುತ್ತೀರ್ಣರಾದರೆ ಕ್ರಮ ಕೈಗೊಳ್ಳುವುದಾಗಿ ಬಿಎಸ್ಇಬಿ ಅಧ್ಯಕ್ಷ ಲಕ್ಷ್ಮೇಶ್ವರ ಪ್ರಸಾದ್ ಸಿಂಗ್ ಪ್ರಕಟಿಸಿದ್ದಾರೆ.
ತಪ್ಪಿತಸ್ಥರು ಎಂದು ಕಂಡುಬಂದರೆ, ಮೌಲ್ಯಮಾಪಕರು ಹಾಗೂ ಪರೀಕ್ಷಾ ಮೇಲ್ವಿಚಾರಕ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ. ಈ ಇಬ್ಬರೂ ಟಾಪರ್ ವಿದ್ಯಾರ್ಥಿಗಳು ವಿಷ್ಣು ರೇ ಕಾಲೇಜಿನವರು. ವಿಜ್ಞಾನ ವಿಭಾಗದ ಮೂರನೆ ಟಾಪರ್ ರಾಹುಲ್ ಕುಮಾರ್ ಕೂಡಾ ಇದೇ ಕಾಲೇಜಿನ ವಿದ್ಯಾರ್ಥಿ.