ಮುಸ್ಲಿಮರಿಗೆ ವಾಸ್ತವ್ಯಕ್ಕೆ ಮನೆ ನೀಡಬೇಡಿ, ಶಾಂತಿ ಭಂಗವಾದೀತು!: ಪೂರ್ವಗ್ರಹಪೀಡಿತ ಕುಪರಾಯಿ ನಿವಾಸಿಗಳು

ವಡೋದರ, ಜೂನ್ 2: ವಡೋದರ ಸಮೀಪದ ಕುಪರಾಯಿ ನಿವಾಸಿಗಳು ನಗರ ನಿಗಮಕ್ಕೆ ಪತ್ರ ಬರೆದು 300ವಲಸಿಗರಿಗೆ (ಇವರಲ್ಲಿ ಹೆಚ್ಚಿನವರು ಮುಸ್ಲಿಮರು) ಇಲ್ಲಿ ವಾಸ್ತವ್ಯ ಮಾಡಿಕೊಡುವುದನ್ನು ವಿರೋಧಿಸಿದ್ದಾರೆ. ಸುಲೈಮಾನ್ ಚಾಲ್‌ನಲ್ಲಿ ಈ ಕುಟುಂಬಗಳ ಮನೆ ಕೆಡವಿದ ಬಳಿಕ ಎಲ್ಲರಿಗೂ ಕಪರಾಯಿಯಲ್ಲಿ ವಾಸ್ತವ್ಯ ನೀಡುವ ನಿರ್ಧಾರವನ್ನು ನಗರ ನಿಗಮ ಮಾಡಿತ್ತು. ಮುಸ್ಲಿಮರು ತಮ್ಮ ಕಾಲನಿಯಲ್ಲಿ ವಾಸಿಸುವುದರಿಂದ "ಶಾಂತಿ ಪ್ರಿಯ ವಾತಾವರಣ ಕದಡಬಹುದು" ಯಾಕೆಂದರೆ" ಅವರು ದಿನಾಲೂ ಬೈಗುಳ-ಜಗಳ-ಹೊಡೆದಾಟ ನಡೆಸುತ್ತಾರೆ’ ಎಂದು ಪೂರ್ವಗ್ರಹಪೀಡಿತ ಪತ್ರದಲ್ಲಿ ತಿಳಿಸಿದ್ದಾರೆ. ಕುಪರಾಯಿ, ಹನುಮಾನ್ ಟೇಕರಿ ಎಂಬಲ್ಲಿಂದ ಒಂದು ಕಿ.ಮೀ. ದೂರದಲ್ಲಿದೆ. 2002ರ ಗುಜರಾತ್ ಹಿಂಸಾಚಾರದಲ್ಲಿ ಇಲ್ಲಿ ಮುಸ್ಲಿಮ್ ಕುಟುಂಬವೊಂದು ನಡೆಸುತ್ತಿದ್ದ ಬೆಸ್ಟ್ ಬೇಕರಿಯನ್ನು ಸಂಪೂರ್ಣ ಸುಟ್ಟು ಹಾಕಲಾಗಿತ್ತು. ಈ ಘಟನೆಯಲ್ಲಿ ಹದಿನಾಲ್ಕು ಮಂದಿ ಮೃತರಾಗಿದ್ದರು. ವಡೋದರ ನಗರ ನಿಗಮದ ಸ್ಲಂ ಮುಕ್ತ ವಡೋದರ ಅಭಿಯಾನದ ಪ್ರಯುಕ್ತ ಮಂಗಳವಾರ ಸುಲೈಮಾನ್ ಚಾಲ್‌ನ 318 ಮನೆಗಳನ್ನು ಕೆಡವಿ ಹಾಕಲಾಗಿದ್ದು ಸೋಮವಾರ ಮನೆಕಳಕೊಂಡ 318 ಕುಟುಂಬಗಳಿಗೆ ಮನೆ ಆಯ್ಕೆಗಾಗಿ ಡ್ರಾವೊಂದನ್ನು ನಡೆಸಲಾಗಿತ್ತು. ಇಲ್ಲಿ ಮನೆಕಳಕೊಂಡವರಿಗೆ ಮೂಲಭೂತ ಸೌಕರ್ಯದೊಂದಿಗೆ ಹೌಸಿಂಗ್ ಯೋಜನೆ ಮೂಲಕ ಮನೆ ನೀಡಲಾಗುತ್ತದೆ. ಎಮನೆಯನ್ನು ಕೆಡವಿದ್ದರಿಂದ ಕುಪಿತರಾದ ಕೆಲವರು ಮಂಗಳವಾರ ಒಂದು ಪೊಲೀಸ್ ಚೌಕಿ, ಒಂದು ಸಿಟಿ ಬಸ್ ಮತ್ತು ಹತ್ತು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಎರಡು ಗಂಟೆಯವರೆಗೆ ಪ್ರತಿಭಟನಾಕಾರರು ಗದ್ದಲವೆಬ್ಬಿಸಿದರು ಪೊಲೀಸರು ಬಲಪ್ರಯೋಗಿಸಿ ಅವರನ್ನು ಚದುರಿಸಿರಲಿಲ್ಲ. ಬುಧವಾರ ಕಪುರಾಯಿ ನಿವಾಸಿಗಳು ವಡೋದರ ನಗರ ನಿಗಮ ಅಧ್ಯಕ್ಷ ಡಾ.ಜೋಗೇಶ್ ಸೇಠ್‌ರನ್ನು ಭೇಟಿಯಾಗಿ ನಮ್ಮಲ್ಲಿ ಮುಸ್ಲಿಮರಿಗೆ ಮನೆ ನೀಡಬಾರದೆಂದು ವಿನಂತಿಸಿ ಮನವಿಯನ್ನು ಸಲ್ಲಿಸಿದ್ದಾರೆ.
ಸುಲೈಮಾನ್ ಚಾಲ್‌ನ ಮುಸ್ಲಿಮ್ ಕುಟುಂಬಕ್ಕೆ ಮನೆಯನ್ನು ಇಲ್ಲಿ ನೀಡುವುದರಿಂದ ಇಲ್ಲಿನ ಶಾಂತಿಪ್ರಿಯ ವಾತಾವರಣ ಕೆಟ್ಟು ಹೋಗಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಮುಸ್ಲಿಮರನ್ನು ಇಲ್ಲಿ ನೆಲಸುವಂತೆ ಮಾಡಿದರೆ ದಂಗೆ ಹೊಡೆದಾಟ ಮತ್ತು ಅಪರಾಧ ಕೃತ್ಯಗಳು ನಡೆಯಬಹುದು ಹಾಗೂ ಸಾಮಾಜಿಕ ಶಾಂತಿ ಕೆಡಬಹುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.





