ಮನೆಯ ಹೊರಗೆ ಯುವಕನೊಂದಿಗೆ ಮಾತಾಡಿದಕ್ಕೆ ಪುತ್ರಿಯನ್ನು ಇರಿದು ಕೊಂದ ತಂದೆ!

ಹೊಸದಿಲ್ಲಿ, ಜೂನ್ 2: ಮನೆಯ ಹೊರಗೆ ಯುವಕನೊಂದಿಗೆ ತನ್ನ ಇಬ್ಬರು ಪುತ್ರಿಯರು ಮಾತಾಡಿದ್ದನ್ನು ಕಂಡು ಸಂಶಯಗೊಂಡ ತಂದೆಯೊಬ್ಬ ಅವರಿಬ್ಬರಿಗೆ ಚೂರಿಯಿಂದ ಇರಿದಿದ್ದಾನೆ. ಇಪ್ಪತ್ತು ಸಲ ಚಾಕು ಇರಿತಕ್ಕೊಳಗಾದ ಹಿರಿಯ ಪುತ್ರಿ ಮೃತಳಾಗಿದ್ದಾಳೆ. ಇನ್ನೊಬ್ಬಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ.
ಟೈಮ್ಸ್ ಆಫ್ ಇಂಡಿಯ ವರದಿ ಮಾಡಿರುವ ಪ್ರಕಾರ ಕೊಲೆಗಡುಕ ತಂದೆ ಐವತ್ತೆರಡು ವರ್ಷ ವಯಸ್ಸಿನ ಗೋವಾದಲ್ಲಿ ಪೈಂಟರ್ ವೃತ್ತಿಯಲ್ಲಿರುವ ತಮಿಳ್ನಾಡು ಮೂಲದ ವ್ಯಕ್ತಿಯಾಗಿದ್ದಾನೆ. ಅವನ ಜೊತೆ ಅವನ ಕುಟುಂಬವೂ ಗೋವಾದಲ್ಲೇ ವಾಸಿಸುತ್ತಿದೆ.
ಘಟನಾಸ್ಥಳಕ್ಕೆ ಪೊಲೀಸರು ತಲುಪುವ ಮೊದಲೇ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಆರೋಪಿ ಶಂಕರ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳುವ ಪ್ರಕಾರ ಆರೋಪಿಯು ಕೆಲಸದಲ್ಲಿಂದ ಸಂಜೆ ಬಂದಾಗ ಅವನ ಇಬ್ಬರು ಪುತ್ರಿಯರು ಮನೆಯ ಹೊರಗಡೆ ಒಬ್ಬ ಯುವಕನೊಂದಿಗೆ ಮಾತಾಡುತ್ತಿದ್ದರು. ಸಂಶಯದಿಂದ ಕೋಪಾವೇಶಗೊಂಡ ಆತ ಇಬ್ಬರೂ ಪುತ್ರಿಯರಿಗೆ ಚಾಕುವಿನಿಂದ ಇರಿದ್ದಿದ್ದಾನೆ. ಮೃತಳಾದ ಹಿರಿಯ ಪುತ್ರಿಯ ದೇಹದಲ್ಲಿ ಇಪ್ಪತ್ತು ಗಾಯದ ಗುರುತುಗಳಿವೆ. ಕಿರಿಯ ಮಗಳಿಗೆ ಗಂಭೀರ ಗಾಯವಾಗದ್ದರಿಂದ ಜೀವಂತ ಉಳಿದಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.







