ಅಡಿಕೆ ತೋಟಕ್ಕೆ ಕೊಳೆ ರೋಗದ ಭೀತಿಯೇ? ಇಲ್ಲಿದೆ ಪರಿಹಾರ

ಬಂಟ್ವಾಳ, ಜೂ. 2: ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ಕೊಕೋಗಳಿಗೆ ಪ್ರತೀ ಮಳೆಗಾಲದ ಸಮಯದಲ್ಲಿ ಕೊಳೆ ರೋಗ ತಗಲಿ ವ್ಯಾಪಕ ಹಾನಿ ಉಂಟುಮಾಡುತ್ತಿರುವುದು ನಮ್ಮಗೆಲ್ಲ ತಿಳಿದಿರುವ ವಿಷಯವೇ ಆಗಿದೆ. ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ವ್ಯಾಪಕವಾಗಿ ಹರಡುತ್ತದೆ. ಬಹಳಷ್ಟು ಸಲ ಈ ರೋಗವನ್ನು ನಿಯಂತ್ರಿಸಲು ಕೃಷಿಕರು ಹರಸಾಹಸಪಡುತ್ತಾರೆ.
ಕೊಳೆ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳಿಗೆ ಕೃಷಿಕರು ಪ್ರಾಮುಖ್ಯತೆಯನ್ನು ನೀಡಬೇಕಾದುದು ಅತೀ ಅಗತ್ಯವಾಗಿದೆ. ಭಾರೀ ಹಾನಿ ಉಂಟುಮಾಡುವ ಕೊಳೆರೋಗವನ್ನು ಹರಡುವ ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸಲು ಬಹಳಷ್ಟು ವಿಧ ವಿಧಾನಗಳನ್ನು ಪ್ರಚಲಿತದಲ್ಲಿದ್ದರೂ ತಲೆತಲಾಂತರದಿಂದ ತಿಳಿದು ಬಂದ ಸಮರ್ಪಕ, ಸಮ್ಮಿಶ್ರ ಬೋರ್ಡೋ ದ್ರಾವಣದಷ್ಟು ಉಪಯುಕ್ತ ಹಾಗೂ ಪರಿಣಾಮಕಾರಿಯಾದಷ್ಟು ವಿಧಾನ ಬೇರೊಂದಿಲ್ಲ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿರುತ್ತದೆ. ಸುಮಾರು 1910ರ ಸಂದರ್ಭದಲ್ಲಿ ಡಾ. ಕೂಲ್‌ಮನ್‌ರವರಿಂದ ಅಡಿಕೆ ಕೊಳೆರೋಗವನ್ನು ಬೋರ್ಡೋ ಮಿಶ್ರಣದಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ದೃಢಪಟ್ಟಲ್ಲಿಂದ ಇಲ್ಲಿಯವರೆಗೆ ಅಡಿಕೆ, ಕಾಳುಮೆಣಸಿಗೆ ಬರುವ ಕೊಳೆರೋಗವನ್ನು ನಿಯಂತ್ರಿಸಲು ಬೋರ್ಡೋ ಮಿಶ್ರಣದಷ್ಟು ಉಪಯುಕ್ತ ರೋಗನಾಶಕ ಬೇರೆ ಯಾವುದೂ ಕೂಡಾ ದೃಢಪಟ್ಟಿರುವುದಿಲ್ಲ. ಇಂದಿಗೂ ಕೂಡ ಈ ಮಿಶ್ರಣ ರೋಗ ನಿಯಂತ್ರಣದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
ಪ್ರಸ್ತುತ ಬೇರೆ ಬೇರೆ ಖಾಸಗಿ ಕಂಪೆನಿಗಳಿಂದ ಸಸ್ಯಜನ್ಯ ಔಷಧಿ, ಮಿಶ್ರಣಗಳು ಮಾರುಕಟ್ಟೆಯಲ್ಲಿ ಕೊಳೆರೋಗ ನಿಯಂತ್ರಣ ಮಾಡುತ್ತದೆಂದು ಪ್ರಚಾರದಲ್ಲಿದ್ದರೂ ಅವುಗಳ ಸಂಶೋಧನೆಗಳು ಪರಿಪೂರ್ಣವಾಗಿ ದೃಢಪಡಿಸಿರುವುದಿಲ್ಲ. ಅಡಿಕೆ ಬೆಳೆಗಾರರು ಈ ವಾಸ್ತವಿಕತೆಯನ್ನು ಅರ್ಥೈಸಿಕೊಂಡು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಸಮರ್ಪಕ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುವುದು ಮಹತ್ವಪೂರ್ಣ ಅಂಶವಾಗಿರುತ್ತದೆ.
ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾಗುವ ಸಾಮಾಗ್ರಿಗಳು
100 ಲೀಟರ್ ಬೋರ್ಡೋ ಮಿಶ್ರಣ ತಯಾರಿಸಲು ಮೈಲುತುತ್ತು ಹರಳು 1 ಕೆ.ಜಿ., ಉತ್ತಮ ಗುಣಮಟ್ಟದ ಚಿಪ್ಪು ಸುಣ್ಣ 1 ಕೆ.ಜಿ., ನೀರು 100 ಲೀಟರ್, ಪ್ಲಾಸ್ಟಿಕ್, ಮಣ್ಣಿನ ಪಾತ್ರಗಳು ಮುಂತಾದ ಸಾಮಗ್ರಿಗಳು ಅವಶ್ಯಕವಾಗಿದೆ. ತಯಾರಿಸುವ ವಿಧಾನ: ಬೋರ್ಡೋ ಮಿಶ್ರಣ ತಯಾರಿಸುವಾಗ ಮೈಲುತುತ್ತು ಹರಳು ಹಾಗೂ ಸುಣ್ಣವನ್ನು ಸಂಪೂರ್ಣವಾಗಿ ನೀರಿನಲ್ಲಿ ಕರಗಿಸುವ ಸಲುವಾಗಿ ಒಂದು ಪಾತ್ರೆಯಲ್ಲಿ 10 ಲೀಟರ್ ನೀರಿ ತೆಗೆದು 1 ಕೆ.ಜಿ. ಮೈಲುತುತ್ತಿನ ಹರಳುಗಳನ್ನು ಪ್ರತ್ಯೇಕವಾಗಿ ಕರಗಿಸಿ ದ್ರಾವಣ ತಯಾರಿಸಿಕೊಳ್ಳಬೇಕು.
ಇನ್ನೊಂದು ಪಾತ್ರೆಯಲ್ಲಿ 10 ಲೀಟರ್ ನೀರಿನಲ್ಲಿ 1 ಕೆ.ಜಿ. ಉತ್ತಮ ಗುಣಮಟ್ಟದ ಚಿಪ್ಪು ಸುಣ್ಣವನ್ನು ಕರಗಿಸಿ ಸುಣ್ಣದ ನೀರನ್ನು ತಯಾರಿಸಬೇಕು. ನಂತರ ಈ ಎರಡು ಪಾತ್ರೆಗಳ ದ್ರಾವಣವನ್ನು 80 ಲೀಟರ್ ನೀರಿರುವ ಮೂರನೆಯ ದೊಡ್ಡ ಪಾತ್ರೆಗೆ ನಿಧಾನವಾಗಿ ಮರದ ಕೋಲಿನ ಸಹಾಯದಿಂದ ದ್ರಾವಣವನ್ನು ತಿರುಗಿಸುತ್ತಾ ಸುರಿಯಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಿದಂತೆ ದ್ರಾವಣವನ್ನು ಲಿಟ್ಮಸ್ ಪೇಪರಿನಿಂದ ಅಥವಾ ಹೊಸದಾದ ಸ್ಟೀಲ್ ಬ್ಲೇಡ್, ಚಾಕುವನ್ನು ದ್ರಾವಣದಲ್ಲಿ ಅದ್ದಿ ಪರೀಕ್ಷಿಸಿ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಅಂಶ ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. (ತಾಮ್ರದ ಅಂಶವಿದ್ದಲ್ಲಿ ಲಿಟ್ಮಸ್ ಪೇಪರ್ ದ್ರಾವಣದಲ್ಲಿ ಅದ್ದಿದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ಸ್ಟೀಲ್ ಬ್ಲೇಡ್, ಚಾಕುವಿನ ಹೊಳಪಾದ ವೈಯಲ್ಲಿ ಕೆಂಪು ಬಣ್ಣದ ಲೇಪನ ಕಂಡುಬರುತ್ತದೆ).
ಹೆಚ್ಚುವರಿ ತಾಮ್ರದ ಅಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು. ಪರೀಕ್ಷೆಯನ್ನು ಪುನಃ ಮಾಡಿ ದ್ರಾವಣವು ಆಮದಲೀಯತೆಯಿಂದ ಹೊರ ಬಂದು ನ್ಯೂಟ್ರನ್ ರಸಸಾರ ಹೊಂದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಈ ಮೇಲೆ ತಿಳಿಸಿದಂತೆ ತಯಾರಿಸಲಾದ ಹೊಸದಾಗಿರುವ ಬೋರ್ಡೋ ಮಿಶ್ರಣವನ್ನು ಅಡಿಕೆ ಗೊನೆಗಳ ಮೇಲೆ ತೀರ ಹತ್ತಿರದಿಂದ ಸಣ್ಣ ಹನಿಗಳ ರೂಪದಲ್ಲಿ ಸಿಂಪಡಣೆಯಾಗುವಂತೆ ಸಿಂಪಡಿಸಬೇಕು. ಈ ದ್ರಾವಣಕ್ಕೆ ಅಂದಾಜು 45 ದಿನಗಳ ಕಾಲ ರೋಗವನ್ನು ತಹಬದಿಗೆ ತರುವ ಶಕ್ತಿ ಇದ್ದರೂ ಕೂಡಾ 30ರಿಂದ 45 ದಿನಗಳ ಅಂತರದಲ್ಲಿ ವಾತಾವರಣದ ಲಕ್ಷಣಗಳನ್ನು ಅರಿಯುಕೊಂಡು ಮರುಸಿಂಪಡಣೆ ಮಾಡುವುದು ಸೂಕ್ತವಾಗಿರುತ್ತದೆ. ಬೋರ್ಡೋ ಮಿಶ್ರಣವು ಬೇರಾವುದೇ ರಾಸಾಯನಿಕಗಳೊಂದಿಗೆ ಅಥವಾ ಮಿಶ್ರಣದೊಂದೊಗೆ ಹೊಂದಾಣಿಕೆಯನ್ನು ಹೊಂದಿಲ್ಲವಾದ ಕಾರಣ ಬೇರೆಯಾವುದೇ ಕೀಟನಾಶಕವನ್ನು ಇದರೊಂದಿಗೆ ಬೆರೆಸಿ ಸಿಂಪಡಣೆ ಮಾಡಬಾರದು.
ಸಿಂಪರಣಾ ವಿಧಾನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್‌ನಿಂದ ಆಗಸ್ಟ್‌ನವರೆಗೆ ತೀವ್ರ ತರಹದ ಮಳೆ ಇರುವ ಕಾರಣ ಮಂಗಾರು ಆರಂಕ್ಕೆ ಮುನ್ನ ಒಂದೆರಡು ಮಳೆ ಬಿದ್ದ ಕೂಡಲೇ ಅಡಿಕೆ, ಕಾಳುಮೆಣಸು, ಕೊಕೋ, ತೆಂಗು ಬೆಳೆಗಳಿಗೆ ಬೋರ್ಡೋ ದ್ರಾವಣವನ್ನು ಮುಂಜಾಗರೂಕತಾ ಸಿಂಪಡಣೆ ಮಾಡುವುದು ರೋಗ ನಿಯಂತ್ರಣದಲ್ಲಿ ಬೆಳೆಗಾರರು ಅನುಸರಿಸಬೇಕಾದ ಪ್ರಥಮ ಹಾಗೂ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಕೈಗೊಳ್ಳಲು ಉದಾಸಿನ ಮಾಡಿದಲ್ಲಿ ಬೆಳೆಗಾರರಿಗೆ ಬೋರ್ಡೋ ದ್ರಾವಣ ಸಿಂಪಡಿಸಲು ಯೋಗ್ಯ ವಾತಾವರಣ ಸಿಕ್ಕದೆ ಹೋಗಿ ಬೆಳೆ ರೋಗಕ್ಕೆ ತುತ್ತಾಗಿ ಹಾನಿ ಸಂವಿಸುವುದು ನಿಶ್ಚಿತ. ಮೊದಲ ಸಿಂಪಡಣೆ ನಂತರ 30-40 ದಿನಗಳ ಅಂತರದಲ್ಲಿ ವಾತಾವರಣವನ್ನು ಅನುಸರಿಸಿಕೊಂಡು ಇನ್ನೊಂದು ಸುತ್ತಿನ ಸಿಂಪಡನೆ ಅಗತ್ಯವಾಗಿ ಕೈಗೊಳ್ಳಬೇಕು. ಅಗತ್ಯ ಬಿದ್ದಲ್ಲಿ 3ನೆ ಸಿಂಪಡಣೆಯನ್ನು ಕೈಗೊಳ್ಳಬೇಕು.
ಕೃಷಿಕರು ಪ್ರಸ್ತುತ ಮಾರುಕಟ್ಟೆಯಲ್ಲಿನ ವಿವಿಧ ಪ್ರಲೋನೆಗಳಿಗೆ ಒಳಗಾಗಿ ಸಂಶೋಧನೆಗಳಿಂದ ಪರಿಪೂರ್ಣವಾಗಿ ದೃಢಪಡದ ಖಾಸಗಿ ಕಂಪೆನಿಗಳ ಸಸ್ಯಜನ್ಯ ಔಷಧಿ, ಮಿಶ್ರಣಗಳನ್ನು ಬಳಸಿ ಮುಂದೆ ನಷ್ಟವನ್ನು ತಂದುಕೊಂಡಲ್ಲಿ ಅದಕ್ಕೆ ಕೃಷಿಕರೇ ಜವಾಬ್ದಾರಿಯಾರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ತೋಟಗಾರಿಕೆ ಇಲಾಖಾ ಕಚೇರಿಯನ್ನು ಸಂಪರ್ಕಿಸಿ ವಿವರ ಪಡೆದುಕೊಳ್ಳಬಹುದಾಗಿದೆ ಎಂದು ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.







