ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಮುಷ್ಕರಕ್ಕೆ ತಾಲೂಕಿನಾದ್ಯಂತ ಸಂಪೂರ್ಣ ಬೆಂಬಲ
ಬಂಟ್ವಾಳ, ಜೂ. 2: ಸಮಾನ ವೇತನ ತಾರತಮ್ಯ ನೀತಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಕರೆ ನೀಡಿದ್ದ ರಾಜ್ಯ ಸರಕಾರಿ ನೌಕರರ ಒಂದು ದಿನ(ಗುರುವಾರ)ದ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಾದ್ಯಂತ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ಬಿ.ಸಿ.ರೋಡ್ ತಾಲೂಕು ಕಚೇರಿಯಲ್ಲಿರುವ ಕಂದಾಯ, ಚುನಾವಣೆ, ಆಹಾರ, ಅರಣ್ಯ ಸೇರಿದಂತೆ ತಾಲೂಕಿನಾದ್ಯಂತ ಕಾರ್ಯಾಚರಿಸುತ್ತಿರುವ ಎಲ್ಲ ಸರಕಾರಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕೆಲಸಕ್ಕೆ ಗೈರಾಜರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಗುರುವಾರ ಯಾವುದೇ ಸರಕಾರಿ ಕಚೇರಿಗಳು ಬಾಗಿಲು ತೆರೆಯಲಿಲ್ಲ. ಆದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡರಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಸೇವೆ ಹಾಗೂ ತುರ್ತು ಸೇವೆ ಅಗತ್ಯವಿರುವ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ಕೆಲವು ನೌಕರರು ಕರ್ತವ್ಯ ನಿರ್ವಹಿಸಿದರು. ಸರಕಾರಿ ನೌಕರರ ಮುಷ್ಕರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾಹಿತಿಯ ಕೊರೆತೆಯಿಂದಾಗಿ ತಮ್ಮ ಕೆಲಸ ಕಾರ್ಯಗಳಿಗೆ ಸರಕಾರಿ ಕಚೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಕಚೇರಿಗಳ ಬಾಗಿಲು ಮುಚ್ಚಿದ್ದನ್ನು ಕಂಡು ಸಾರ್ವಜನಿಕರು ವಾಪಸ್ ಹೋಗುತ್ತಿದ್ದರು. ಮುಷ್ಕರದ ಬಗ್ಗೆ ಯಾವುದೇ ಬೋರ್ಡ್ ಕೂಡಾ ಸರಕಾರಿ ಕಚೇರಿಗಳ ಎದುರು ಹಾಕದಿರುವುದರಿಂದ ಸಾರ್ವಜನಿಕರು ಸ್ಥಳೀಯ ಅಂಗಡಿಗಳಲ್ಲಿ, ಹೊಟೇಲ್‌ಗಳಲ್ಲಿ ವಿಚಾರಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಪ್ರತೀ ದಿನ ಜನರಿಂದ ತುಂಬುತ್ತಿದ್ದ ಬಿ.ಸಿ.ರೋಡ್ ತಾಲೂಕು ಕಚೇರಿ ಸರಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಂದ್ ಆಗಿದ್ದರಿಂದ ಸರಕಾರಿ ರಜಾದಿನದಂತೆ ಭಾಸವಾದವು.
ಹಾಗೆಯೇ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕ, ಶಿಕ್ಷಕಿಯರು ಕೆಲಸಕ್ಕೆ ಗೈರಾಜರಾಗಿದ್ದರಿಂದ ತಾಲೂಕಿನ ಯಾವುದೇ ಸರಕಾರಿ ಶಾಲೆಗಳಲ್ಲಿ ಪಾಠ ಪ್ರವಚನ ನಡೆಯಲಿಲ್ಲ. ಹೆಚ್ಚಿನ ಶಾಲೆಗಳ ಶಿಕ್ಷಕ, ಶಿಕ್ಷಕಿಯರು ತಮ್ಮ ಗೈರು ಹಾಜರಾತಿಯ ಬಗ್ಗೆ ಮೊದಲ ದಿನವೇ ಮಕ್ಕಳಿಗೆ ತಿಳಿಸಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿದ್ದರು. ಖಾಸಗಿ ಎಲ್ಲ ಶಾಲೆಗಳಲ್ಲಿ ಎಂದಿನಂತೆ ಪಾಠ ಪ್ರವಚನ ನಡೆದವು.
ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ನಡುವಿನ ವೇತನ ತಾರತಮ್ಯವನ್ನು ಅವಲೋಕಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಕೇಂದ್ರ ಸರಕಾರಿ ನೌಕರರಂತೆ ರಾಜ್ಯ ಸರಕಾರಿ ನೌಕರರಿಗೂ ಸರಿಸಮಾನವಾದ ತ್ಯೆ ಮಂಜೂರು ಮಾಡಬೇಕೆಂದು ರಾಜ್ಯ ಸರಕಾರಿ ನೌಕರರ ಸಂಘ ಹಲವು ವರ್ಷದಿಂದ ಆಗ್ರಹಿಸುತ್ತಾ ಬಂದಿದ್ದರೂ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿ ರಾಜ್ಯ ನೌಕರರ ಸಂಘದ ಕೇಂದ್ರ ಶಾಖೆ ಜೂ. 2ರಂದು ಮುಷ್ಕರಕ್ಕೆ ಕರೆ ನೀಡಿತ್ತು.







