ಹಾಸನ: ಸರಕಾರಿ ನೌಕರರ ಸಾಮೂಹಿಕ ಮುಷ್ಕರ ಯಶಸ್ವಿ
.jpg)
ಹಾಸನ, ಜೂ. 2: ಕೇಂದ್ರ ಸರಕಾರಿ ನೌಕರರಂತೆ ರಾಜ್ಯದ ನೌಕರರಿಗೆ ಸರಿಸಮಾನ ವೇತನ ನೀಡಲು ಆಗ್ರಹಿಸಿ ಸರಕಾರಿ ನೌಕರರು ನಡೆಸಿದ ಸಾಮೂಹಿಕ ಮುಷ್ಕರ ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯಿತು.
ಹಾಸನ ಜಿಲ್ಲಾದ್ಯಂತ ಗುರುವಾರ ಬೆಳಗ್ಗಿನಿಂದಲೇ ಸರಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಿ ಮೂಲಕ ಬೆಂಬಲ ಸೂಚಿಸಿದರು. ಹಾಸನದಲ್ಲಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್, ತಾಲೂಕು ಕಚೇರಿ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ನೌಕರರು ಕೆಲಸಕ್ಕೆ ಬರಲಿಲ್ಲ. ಕೆಲ ಅಧಿಕಾರಿಗಳು ಮಾತ್ರ ಒಂಟಿಯಾಗಿ ಕರ್ತವ್ಯದಲ್ಲಿ ಪಾಲ್ಗೊಂಡರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸರಕಾರಿ ನೌಕರರು ನಾನಾ ಸರಕಾರಿ ಕಚೇರಿ ಮುಂದೆ ಘೋಷಣೆ ಕೂಗಿದರು. ನಂತರ ಮಾತನಾಡಿದ ಅವರು, ಮುಷ್ಕರದಲ್ಲಿ 6 ಲಕ್ಷದ 40 ಸಾವಿರ ಜನ ಸರಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗುವುದರ ಮೂಲಕ ಬೆಂಬಲ ಸೂಚಿಸಿದ್ದಾರೆ. ಕೇಂದ್ರದಲ್ಲಿ ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ಸಂಬಳವನ್ನು ರಾಜ್ಯದಲ್ಲೂ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬೇಡಿಕೆ ಮುಂದಿಟ್ಟೆದ್ದೆವು. ಈ ಬಗ್ಗೆ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿತ್ತು. ಆದರೆ ಸಿಎಂ ಕೇಂದ್ರದಿಂದ ಬರುವ ಅನುದಾನದ ಕೊರತೆ ಇದೆ ಎಂದು ತಿಳಿಸಿದ್ದರು. ಅದಕ್ಕಾಗಿ ಒಂದು ವರ್ಷದವರೆಗೂ ತಾಳ್ಮೆಯಿಂದ ಕಾದಿದ್ದು, ಈಗ ಮತ್ತೆ ಅವರ ಮುಂದೆಯೇ ಬೇಡಿಕೆ ಇಡಲಾಗಿದೆ ಎಂದರು.
ನಡೆಸಲಾಗುತ್ತಿರುವ ಸರಕಾರಿ ನೌಕರರ ಮುಷ್ಕರ ಸಾಂಕೇತಿಕವಾಗಿದ್ದು, ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಇದೆ ವೇಳೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಸ್ವಾಮಿ, ಗುಡಗನಹಳ್ಳಿ ಮಂಜುನಾಥ್ ಇತರರು ಇದ್ದರು.
ಸಕಲೇಶಪುರ, ಬೇಲೂರು, ಅರಸಿಕೇರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಆಲೂರು ತಾಲೂಕುಗಳಲ್ಲೂ ಸರಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರು.







