ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

ಬೆಂಗಳೂರು.ಜೂ.2: ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ವಿಷಯದಲ್ಲಿ ದೇಶದ 3 ನೇ ಪ್ರಮುಖ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದ್ದು ಒಟ್ಟಾರೆ ಆಂತರಿಕ ಉತ್ಪನ್ನದ ಪ್ರಮಾಣ 120 ಬಿಲಿಯನ್ ಡಾಲರ್‌ಗಳಿಗೇರಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಭಾರತದ ಏಳು ಮಂದಿ ರಾಯಭಾರಿಗಳು ಹಾಗೂ ಹೈ ಕಮೀಷನರ್‌ಗಳ ಜತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ವಿಷಯ ತಿಳಿಸಿದರು. ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ ಪ್ರಮಾಣ ಶೇ.ಏಳರಷ್ಟಿದ್ದು ಒಟ್ಟಾರೆ 120 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದರು.
ರಾಜ್ಯದ ಒಟ್ಟಾರೆ ರಫ್ತು ಪ್ರಮಾಣ ಶೇ. 24 ರಷ್ಟಿದ್ದರೆ ರಾಜ್ಯದ ರಫ್ತಿನ ಪ್ರಮಾಣ ಶೇಕಡಾ 48 ರಷ್ಟಿದೆ. ದೇಶ ರಫ್ತು ಮಾಡುವ ಸಾಫ್ಟ್‌ವೇರ್ ಉತ್ಪನ್ನಗಳ ಪೈಕಿ ಶೇ. 40 ರಷ್ಟು ಸಾಫ್ಟ್‌ವೇರ್ ಉತ್ಪನ್ನಗಳು ಕರ್ನಾಟಕದಿಂದಲೇ ರಫ್ತಾಗುತ್ತಿವೆ ಎಂದರು.
ಹೀಗೆ ಜಾಗತೀಕರಣಕ್ಕೆ ತನ್ನನ್ನು ತಾನು ತೆರೆದಿಟ್ಟುಕೊಂಡ ರಾಜ್ಯಗಳಲ್ಲಿ ಕರ್ನಾಟಕ ಯಾವತ್ತೂ ಮುಂಚೂಣಿಯಲ್ಲಿದ್ದು ಕೈಗಾರಿಕಾ ಕ್ರಾಂತಿಯ ಮೂಲಕ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಇವತ್ತು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಬರುವವರಿಗೆ ಎಲ್ಲ ಬಗೆಯ ಮೂಲಭೂತ ಸೌಕರ್ಯಗಳು ಲಭ್ಯವಿದ್ದು ಅತ್ಯುತ್ತಮ ರಸ್ತೆಗಳ ಜಾಲವಿದೆ.ಹಡಗುಗಳ ಸುಗಮ ಓಡಾಟಕ್ಕೆ ತದಡಿಯಂತಹ ಪ್ರಮುಖ ಬಂದರುಗಳಿವೆ.
ಇದೇ ರೀತಿ ದೇಶದಲ್ಲೇ ಮೂರನೇ ಸ್ಥಾನದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿದ್ದು ಕೇವಲ ಇಪ್ಪತ್ತು ನಿಮಿಷಗಳಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ ತಲುಪಬಹುದಾಗಿದೆ ಎಂದು ನುಡಿದರು.
ಮೆಟ್ರೋ ರೈಲಿನ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು ಎರಡನೇ ಹಂತದ ಯೋಜನೆ ಪ್ರಗತಿ ಪಥದಲ್ಲಿದೆ.ಹೀಗೆ ಬೆಂಗಳೂರು ಮಾತ್ರವಲ್ಲ,ರಾಜ್ಯದ ಯಾವುದೇ ಭಾಗಗಳನ್ನು ತೆಗೆದುಕೊಂಡರೂ ಕೈಗಾರಿಕೀಕರಣಕ್ಕೆ ಪ್ರಶಸ್ತ ರಾಜ್ಯವಾಗಿ ಕರ್ನಾಟಕ ಬೆಳೆದಿದೆ.
1991 ರಲ್ಲಿ ಜಾಗತೀಕರಣ ಅನುಷ್ಠಾನಗೊಂಡ ನಂತರ ಬಹುಬೇಗನೆ ಅದನ್ನು ಸ್ವೀಕರಿಸಿದ ಮತ್ತು ಬೆಳವಣಿಗೆ ಕಂಡ ರಾಜ್ಯ ಕರ್ನಾಟಕ.ಹೀಗಾಗಿ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಫುಲವಾದ ಅವಕಾಶಗಳಿವೆ ಎಂದು ವಿವರ ನೀಡಿದರು.
ಇದೆಲ್ಲದರ ಪರಿಣಾಮವಾಗಿ ಈ ವರ್ಷ ಇನ್‌ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಏರ್ಪಡಿಸಿದಾಗ ದೇಶ,ವಿದೇಶಗಳ ನೂರಾರು ಕಂಪನಿಗಳು ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದವು ಎಂದವರು ವಿವರಿಸಿದರು.
ಮುಂದಿನ ದಿನಗಳಲ್ಲಿ ಬಂಡವಾಳ ಹೂಡಿಕೆಗೆ ಕರ್ನಾಟಕ ಮತ್ತಷ್ಟು ಪ್ರಶಸ್ತವಾಗಲಿದ್ದು ಈ ಹಿನ್ನೆಲೆಯಲ್ಲಿ ನಿಮ್ಮೆಲ್ಲರ ಸಹಕಾರದಿಂದ ನೀವು ಕಾರ್ಯ ನಿರ್ವಹಿಸುತ್ತಿರುವ ದೇಶಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಬೆಂಬಲ ನೀಡಬೇಕು ಎಂದು ಮನವಿ ಮಾಡಿ ಕೊಂಡರು.
ಕೆಲವೇ ವರ್ಷಗಳಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೂ ಕೈಗಾರಿಕೀಕರಣ ಅದ್ಭುತವಾಗಿ ಆಗಿದೆ.ಮುಂದೆಯೂ ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ವಿಫುಲ ಅವಕಾಶಗಳಿವೆ.ಈ ಹಿನ್ನೆಲೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ತರಲು ಕೇಂದ್ರ ಸರ್ಕಾರ ನಮಗೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ನೆದರ್‌ಲ್ಯಾಂಡ್‌ನಲ್ಲಿ ಭಾರತದ ರಾಯಭಾರಿಯಾಗಿರುವ ಜೆ.ಎಸ್.ಮುಕುಲ್,ನ್ಯೂಜಿಲ್ಯಾಂಡ್‌ನಲ್ಲಿ ಭಾರತದ ಹೈ ಕಮೀಷನರ್ ಆಗಿರುವ ಸಂಜೀವ್ ಕೊಹ್ಲಿ ಅವರಿದ್ದರು.
ಅದೇ ರೀತಿ ಪೋರ್ಚುಗಲ್‌ನಲ್ಲಿ ರಾಯಭಾರಿಯಾಗಿರುವ ನಂದಿನಿ ಸಿಂಗ್ಲಾ,ದಕ್ಷಿಣ ಆಫ್ರಿಕಾದಲ್ಲಿ ಹೈ ಕಮೀಷನರ್ ಆಗಿರುವ ರುಚಿ ಘನಶ್ಯಾಮ್, ಐರ್ಲೆಂಡ್‌ನಲ್ಲಿ ಭಾರತದ ರಾಯಭಾರಿಯಾಗಿರುವ ರಾಧಿಕಾ ಎಲ್.ಲೋಕೇಶ್, ಕೊರಿಯಾದಲ್ಲಿ ರಾಯಭಾರಿಯಾಗಿರುವ ವಿಕ್ರಮ್ ದೊರೆಸ್ವಾಮಿ ಹಾಗೂ ಮೊಜಾಂಬಿಯಾದಲ್ಲಿ ಹೈ ಕಮೀಷನರ್ ಆಗಿರುವ ಗೌರವ್ ಶ್ರೇಷ್ಠ ಉಪಸ್ಥಿತರಿದ್ದರು.







