ಪುತ್ತೂರು: ಮಿನಿ ವಿಧಾನ ಸೌಧದ ಮುಂದೆ ಸರಕಾರಿ ನೌಕರರ ಮುಷ್ಕರ

ಪುತ್ತೂರು, ಜೂ.2: ಸರಕಾರದ ಯೋಜನೆಗಳನ್ನು, ಉದ್ದೇಶಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸರಕಾರಿ ನೌಕರರ ಬೇಡಿಕೆಗಳ ಕುರಿತು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನವಾದ ವೇತನ, ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ರಾಜ್ಯ ಸರಕಾರಿ ನೌಕರರಿಗೂ ಮಂಜೂರು ಮಾಡುವ ಮೂಲಕ ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂದ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ವೌರೀಸ್ ಮಸ್ಕರೇನಸ್ ಆಗ್ರಹಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ನೀಡಿದ ಕರೆಯಂತೆ ಗುರುವಾರ ಕರ್ತವ್ಯಕ್ಕೆ ಗೈರು ಹಾಜರಾಗಿ ಪುತ್ತೂರು ಮಿನಿ ವಿಧಾನಸೌಧದ ಎದುರು ಮುಷ್ಕರ ನಿರತ ತಾಲೂಕಿನ ರಾಜ್ಯ ಸರ್ಕಾರಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಮಾತನಾಡಿ, ಒಂದೇ ರೀತಿಯಲ್ಲಿ ಕೆಲಸ ನಿರ್ವಹಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ವೇತನ ಹಾಗೂ ಇತರ ಸೌಲಭ್ಯಗಳಲ್ಲಿ ಸಾಕಷ್ಟು ವ್ಯತ್ಯಾಸ ಮಾಡಲಾಗಿದೆ. ಕೇಂದ್ರ ಸರಕಾರವು 7ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುತ್ತಿದ್ದರೂ ರಾಜ್ಯ ಸರಕಾರ ರಾಜ್ಯದ ವೇತನ ಆಯೋಗದ ಕುರಿತು ಆಲೋಚನೆಯೇ ಮಾಡುತ್ತಿಲ್ಲ. ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವು ಬಾರಿ ಮನವಿ ಸಲ್ಲಿಸಿದರೂ ಈ ತನಕ ಪ್ರಯೋಜನವಾಗಿಲ್ಲ. ಈ ಕಾರಣದಿಂದ ಮುಷ್ಕರ ಅನಿವಾರ್ಯವಾಗಿದೆ ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ಮಾಮಚ್ಚನ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯವರು ಬೇಡಿಕೆ ಈಡೇರಿಸುವ ಸ್ಪಷ್ಟ ಆಶ್ವಾಸನೆ ನೀಡಿದ್ದರೂ ಈ ತನಕ ಈಡೇರಿಸಿಲ್ಲ. ಈ ಬಾರಿಯ ಆಯವ್ಯಯದಲ್ಲೂ ಈ ಕುರಿತು ಪ್ರಸ್ತಾಪಿಸದಿರುವುದು ರಾಜ್ಯ ಸರಕಾರಿ ನೌಕರರಲ್ಲಿ ಅಸಮಾಧಾನ ಮೂಡಿಸಿದೆ. ಅತಿ ಹೆಚ್ಚು ಸರಕಾರಿ ನೌಕರರನ್ನು ಹೊಂದಿರುವ ಶಿಕ್ಷಕರ ಸಂಘವೂ ಮುಷ್ಕರಕ್ಕೆ ಬೆಂಬಲ ನೀಡಿದೆ. ಇದೇ ಪ್ರಥಮ ಬಾರಿಗೆ ವೇತನ ತಾರತಮ್ಯವನ್ನು ವಿರೋಧಿಸಿ ಪೊಲೀಸರು ಕೂಡ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯ ಸರಕಾರ ಈ ಎಲ್ಲಾ ಬೆಳವಣಿಗೆಗಳನ್ನು ಹಗುರವಾಗಿ ಪರಿಗಣಿಸದೆ ಬೇಡಿಕೆಗಳ ಈಡೇರಿಸುವ ಕುರಿತು ಗಮನಹರಿಸಬೇಕು ಎಂದರು.
ಉಪನ್ಯಾಸಕ ಹರಿಪ್ರಕಾಶ್ ಮತ್ತಿತರರು ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ. ಕೃಷ್ಣಪ್ಪ, ಪುತ್ತೂರು ಶಾಖೆಯ ಕೋಶಾಧಿಕಾರಿ ನಾಗೇಶ ಕೆ., ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ಪುತ್ತೂರು ಸರಕಾರಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಸುಮಾರು ನೂರಾರು ಸರಕಾರಿ ನೌಕರರು ಮಿನಿ ವಿಧಾನಸೌಧದ ಎದುರಿನ ಮೆಟ್ಟಿಲುಗಳಲ್ಲಿ ಕುಳಿತುಕೊಂಡು ಮುಷ್ಕರ ನಡೆಸಿದರು. ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಶಾಖೆಯ ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.







