ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಐವನ್ ಭೇಟಿ

ಮಂಗಳೂರು, ಜೂ. 2: ತಾಲೂಕಿನ ಅಡ್ಯಾರ್‌ಕಟ್ಟೆ ಬಳಿ ಕೃತಕ ನೆರೆಯಿಂದ ಅಪಾರ ಸೊತ್ತುಗಳು ನಾಶಗೊಂಡಿದ್ದು, ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಭೇಟಿ ನೀಡಿದರು.
ಅಡ್ಯಾರ್‌ಕಟ್ಟೆ ಬಳಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕೃತಕ ನೆರೆ ಉಂಟಾಗಿ 25 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಅಪಾರ ಸೊತ್ತುಗಳು ನಾಶವಾಗಿದ್ದು, ಮನೆಗಳು ಕೂಡಾ ಅಪಾಯದ ಅಂಚಿನಲ್ಲಿವೆ. ಚರಂಡಿ ನಿರ್ಮಾಣ ಮಾಡದೆ ಕೃತಕ ನೆರೆ ಉಂಟಾಗಿದ್ದು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಹಾಗೂ ಕೃತಕ ನೆರೆ ಉಂಟಾಗದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಜಿಲ್ಲಾಧಿಕಾರಿ ತಹಶೀಲ್ದಾರ್, ಕಂದಾಯ ಅಧಿಕಾರಿಗಳಿಗೆ ಜಿ.ಪಂ. ಕಾರ್ಯನಿರ್ವಹಣಾ ಅಧಿಕಾರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ಮಾಜಿ ಜಿ.ಪಂ.ಸದಸ್ಯ ಮೆಲ್ವಿನ್ ಡಿಸೋಜಾ, ತಾ.ಪಂ. ಸದಸ್ಯರಾದ ಅಬ್ದುಲ್ ಸಮದ್, ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ತಹಶೀಲ್ದಾರ್, ಗುರುಪುರ ರೆವೆನ್ಯೂ ಆರ್.ಐ.ಇನ್ಸ್‌ಪೆಕ್ಟರ್, ಗ್ರಾ.ಪಂ. ಪಿಡಿಒ ಮಾಜಿ ಗ್ರಾಮ ಪಂ.ಅಧ್ಯಕ್ಷ, ಸುರೇಂದ್ರ ಕಂಬಳಿ, ಮಾಜಿ ಗ್ರಾಮ ಪಂ. ಸದಸ್ಯ ಅಬ್ದುಲ್ ಕರೀಂ, ಮಹೇಶ್ ಕೋಡಿಕಲ್ ಮುಂತಾದವರು ಉಪಸ್ಥಿತರಿದ್ದರು.





