ಭಟ್ಕಳ: ರಾಬಿತಾ ಸೊಸೈಟಿಯಿಂದ ಸುರಕ್ಷ ಚಾಲನೆ ಹಾಗೂ ಸ್ವಚ್ಛ ಭಟ್ಕಳ ಯೋಜನೆ

ಭಟ್ಕಳ, ಜೂ. 2: ಇಲ್ಲಿನ ಅನಿವಾಸಿ ಭಾರತೀಯರ ರಾಬಿತಾ ಸೂಸೈಟಿಯು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಹಯೋಗದೊಂದಿಗೆ ಸುರಕ್ಷ ಚಾಲನೆ ಹಾಗೂ ಕ್ಲೀನ್ ಭಟ್ಕಳ ಯೋಜನೆ ರೂಪಿಸಿರುವುದಾಗಿ ರಾಬೀತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಕೊಚ್ಚಾಪ್ಪುಹೇಳಿದ್ದಾರೆ.
ಭಟ್ಕಳದ ಅಭಿವೃದ್ಧಿಯ ಕುರಿತಂತೆ ಅನಿವಾಸಿ ಭಾರತೀಯರು ದುಬೈಯಲ್ಲಿ ಕುಳಿತು ಕನಸು ಕಾಣುತ್ತಿದ್ದಾರೆ. ತಮ್ಮ ತಾಯ್ನೆಲದಲ್ಲಿ ನಿತ್ಯವೂ ಹಲವಾರು ಅಪಘಾತಗಳು ಸಂಭವಿಸುತ್ತಿದ್ದು, ವಾರದಲ್ಲಿ ಒಂದೆರಡು ಯುವ ಜೀವಗಳು ಅಪಘಾತಗಳಿಗೆ ಬಲಿಯಾಗುತ್ತಿದೆ. ಯುವಕರಲ್ಲಿ ಹಾಗೂ ಜನರಲ್ಲಿ ಅಪಘಾತಗಳ ಕುರಿತಂತೆ ಜಾಗೃತಿ ಮೂಡಿಸುವುದು ಸೇರಿದಂತೆ ವಿದ್ಯಾರ್ಥಿಗಳಿಗೆ ಈಗಿಂದಲೇ ಅವರನ್ನು ಸಿದ್ಧಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.
ನಮ್ಮ ಯೋಜನೆ ಕೇವಲ ಮುಸ್ಲಿಮ್ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಇಲ್ಲಿನ ಎಲ್ಲ ಧರ್ಮಿಯರು ಪಾಲ್ಗೊಳ್ಳುವ, ಎಲ್ಲರ ಅಭಿವೃದ್ಧಿ ಬಯಸುವ ಯೋಜನೆಯಾಗಿದೆ. ಭಟ್ಕಳದ ವಿವಿಧ ಸಂಘಸಂಸ್ಥೆಗಳು, ಸರಕಾರಿ ಇಲಾಖೆಗಳು, ಮಂದಿರ ಮಸೀದಿ ಚರ್ಚುಗಳು ಆಡಳಿತ ವರ್ಗವನ್ನು ಸೇರಿಸಿಕೊಂಡು ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಭಟ್ಕಳ ನಗರವು ಕಸದ ಗುಂಡಿಯಾಗಿದೆ. ಸಮರ್ಪಕವಾಗಿ ಕಸ ವಿಲೆವಾರಿ ಮಾಡುವುದು, ಭಟ್ಕಳ ನಗರವನ್ನು ಸ್ವಚ್ಛ ಹಾಗೂ ಸುಂದರಗೊಳಿಸುವುದು ನಮ್ಮ ಯೋಜನೆಯ ಭಾಗವಾಗಿದೆ. ಇದರಲ್ಲಿ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ವಿದ್ಯಾರ್ಥಿಗಳು, ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಜಾಗೃತಿಯನ್ನು ಮಾಡಲಾಗುವುದು. ಈ ಯೋಜನೆ ಕೇವಲ ಒಂದು ದಿನ ಅಥವಾ ವಾರದಲ್ಲಿ ಅನುಷ್ಟಾನಗೊಳಿಸಲು ಸಾಧ್ಯವಿಲ್ಲ. ಯೋಜನೆ ಅನುಷ್ಠಾನ ಕುರಿತಂತೆ ಮೊದಲು ವ್ಯಾಪಕ ಪ್ರಚಾರಾಂದೋಲನ ಹಮ್ಮಿಕೊಳ್ಳುವುದು, ಇದನ್ನು ಕಾರ್ಯಗತಗೊಳಿಸಲು ಭಟ್ಕಳದ ಸಮಸ್ತ ನಾಗರಿಕರ, ವಿವಿಧ ಸಂಘಸಂಸ್ಥೆಗಳ ಸಹಾಯ, ಸಹಕಾರವನ್ನು ಪಡೆದುಕೊಳ್ಳಲಾಗುವುದು ಎಂದು ವಿವರಿಸಿದರು.
ನಗರ ವ್ಯಾಪ್ತಿಯ ಶಾಲೆಗಳಲ್ಲಿ ಸ್ವಚ್ಚತೆ ಕುರಿತಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು, ಹಾಗೂ ಅತ್ಯಂತ ಸ್ವಚ್ಛ ಶಾಲೆಯನ್ನು ಗುರುತಿಸಿ ಅದಕ್ಕೆ ಇಕೋ ಶಾಲೆ ಪ್ರಶಸ್ತಿ ನೀಡುವುದು, ರಸ್ತೆ ಸುರಕ್ಷತೆ ಕುರಿತಂತೆ ಜನಜಾಗೃತಿಯನ್ನುಂಟು ಮಾಡಲು ಕಿರುಚಿತ್ರ, ಚಿತ್ರಮಂದಿರಗಳು, ಫೇಸ್ಬುಕ್, ವಾಟ್ಸ್‌ಆಪ್ ಮೂಲಕ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ ಮೊಯ್ದೀನ್, ಭಟ್ಕಳವವನ್ನು ಕೇವಲ ಭಯೋತ್ಪಾದನೆಯ ವಿಷಯದಲ್ಲಿ ಮಾತ್ರ ಗುರುತಿಸುವಂತೆ ಮಾಡಿದ ಮಾಧ್ಯಮಗಳು ಈಗ ಇಂತಹ ಯೋಜನೆಗಳ ಮೂಲಕ ಭಟ್ಕಳವೆಂದರೆ ಭಯೋತ್ಪಾದನೆಯಲ್ಲ. ಇಲ್ಲಿ ಹಲವು ಉತ್ತಮ ಯೋಜನೆಗಳು ಹಮ್ಮಿಕೊಳ್ಳುವ ಜನರಿದ್ದಾರೆ ಎನ್ನುವುದು ಸಮಾಜಕ್ಕೆ ತೋರಿಸಿಕೊಡುವುದು ಮಾಧ್ಯಮಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಬ್ದುಲ್ ಬಾಸಿತ್ ಹಾಫಿಝ್, ಜೈಲಾನಿ ಶಾಬಂದ್ರಿ, ಇಲ್ಯಾಸ್ ಸಿದ್ದಿಬಾಪ, ಮನಾಝಿರ್ ಉಪಸ್ಥಿತರಿದ್ದರು.







