ಭಟ್ಕಳ: ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಮೌನ ಮೆರವಣಿಗೆ

ಭಟ್ಕಳ, ಜೂ. 2: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಭಟ್ಕಳ ಶಾಖೆಯ ವತಿಯಿಂದ ನಗರದ ಮುಖ್ಯ ರಸ್ತೆಯಲ್ಲಿ ಮೌನ ಮೆರವಣಿಗೆಯನ್ನು ನಡೆಸಿ ನಂತರ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ದಲ್ಲಿ ಮನವಿಯನ್ನು ಓದಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ. ನಾಯ್ಕ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಏಕೈಕ ಸಂಘವಾಗಿದ್ದು, ಸರಕಾರ ರೂಪಿಸುವ ಹಲವಾರು ಜನಪರ ಯೋಜನೆಗಳ ಅನುಷ್ಟಾನದಲ್ಲಿ ರಾಜ್ಯ ಸರಕಾರಿ ನೌಕರರು ಉತ್ತಮ ಕರ್ತವ್ಯ ನಿರ್ವಹಿಸಿ ಸರಕಾರಕ್ಕೆ ಉತ್ತಮ ಕೀರ್ತಿ ತರುವ ಕೆಲಸ ಮಾಡುತ್ತಾರೆ. ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ನೌಕರರಿಗೆ ಸರಿಸಮನಾದ ವೇತನ, ಭತ್ಯೆಗಳನ್ನು ನೀಡಬೇಕು.
ಐದು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುವ ಸಂಪ್ರದಾಯವನ್ನು ಪರಾಮರ್ಶಿಸಿದಲ್ಲಿ ರಾಜ್ಯ ಸರಕಾರವು ಇದುವರೆಗೂ 10ವೇತನ ಆಯೋಗವನ್ನು ರಚಿಸಬೇಕಾಗಿತ್ತು. ಆದರೆ 5 ಆಯೋಗಗಳು, ಮೂರು ವೇತನ ಸಮಿತಿ ಹಾಗೂ ಒಂದು ಸಚಿವ ಸಂಪುಟ ಉಪ ಸಮಿತಿ ರಚಿಸಿ ರಾಜ್ಯ ಸರಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸಿದೆ.
ಪ್ರಸ್ತುತ ಕೇಂದ್ರ ಸರಕಾರದ 7ನೆ ವೇತನ ಆಯೋಗವು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಕೇಂದ್ರ ಸರಕಾರಿ ನೌಕರರಿಗೆ ಶೆ.23.55ರಷ್ಟು ವೇತನ ಹಾಗೂ ಭತ್ಯೆಗಳಲ್ಲಿ ಹೆಚ್ಚು ಮಾಡಲು ಶಿಪಾರಸ್ಸು ಮಾಡಿರುತ್ತದೆ. ಇದು ಅನುಷ್ಟಾನಗೊಂಡಲ್ಲಿ ರಾಜ್ಯ ಹಾಗೂ ಕೇಂದ್ರ ನೌಕರರ ವೇತನದಲ್ಲಿನ ವ್ಯತ್ಯಾಸ ಶೆ.44.06 ರಿಂದ ಗರಿಷ್ಟ ಶೇ.111.33ರವರೆಗೆ ಆಗಲಿದೆ. ಕೇರಳ ರಾಜ್ಯ ಸರಕಾರ 10ನೆ ವೇತನ ಆಯೋಗದ ಶಿಪಾರಸ್ಸನ್ನು ಅನುಷ್ಟಾಕ್ಕೆ ತರಲು 7,222 ಕೋಟಿ ರೂ. ಕಾಯ್ದಿರಿಸಿ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದೆ. ರಾಜ್ಯದಲ್ಲಿಯೂ ಕೂಡಾ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತ ಚಿದಾನಂದ ವಠಾರೆ, ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸರಕಾರಿ ನೌಕರರ ಸಂಘದ ಕಾರ್ಯಕರ್ಶಿ ಉಮೇಶ ಕೆರೆಕಟ್ಟೆ, ಸುಧೀರ್ ಗಾಂವಕರ್, ಜಿ.ಆರ್. ಟ್ಟ, ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ನಾಯ್ಕ, ಕಾರ್ಯದರ್ಶಿ ಗೋಪಾಲ ನಾಯ್ಕ, ಅಶೋಕ ಭಟ್ಟ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಡಿ. ಆಚಾರಿ, ಸುಬಾಸ ಕೊಪ್ಪಿಕರ್ ಹಾಗೂ ವಿವಿಧ ಇಲಾಖೆಯ ನೂರಾರು ನೌಕರರು ಭಾಗವಹಿಸಿದ್ದರು.







