ಭಟ್ಕಳ: ಹೆದ್ದಾರಿ ಕಾಮಗಾರಿಯಿಂದಾಗಿ ಬಾವಿಯ ನೀರು ಕಲುಷಿತ

ಭಟ್ಕಳ, ಜೂ.2: ಮಳೆಗಾಲದ ಆರಂಭಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯ ಕುಡಿಯುವ ನೀರಿನ ಬಾವಿ ಸಂಪೂರ್ಣ ಕಲುಷಿತಗೊಂಡು ಕುಡಿಯುವ ನೀರಿಗೂ ತತ್ವಾರ ಆದ ಘಟನೆ ವರದಿಯಾಗಿದೆ.
ತಾಲೂಕಿನಲ್ಲಿ ಕಳೆದ 2-3 ತಿಂಗಳಿನಿಂದ ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದರೂ ಕೂಡಾ ಬೆಳಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆದ್ರಕೇರಿಯ ರಮಾನಂದ ಅವೃತರ ಮನೆಯ ಬಾವಿಯಲ್ಲಿ ಸಾಕಷ್ಟು ನೀರಿತ್ತು. ಇವರು ಮಾತ್ರವಲ್ಲದೇ ಆಸುಪಾಸಿನ ಜನತೆ ಕೂಡಾ ಉಪಯೋಗಿಸುತ್ತಿದ್ದರು. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಸುತ್ತಮುತ್ತಲಿನ ನೀರೆಲ್ಲಾ ಇವರ ಬಾವಿಗೆ ಇಂಗಿ ಹೋಗಿದ್ದು ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ.
ಇವರ ಬಾವಿಯ ಪಕ್ಕದಲ್ಲಿಯೇ ಸಿ.ಡಿ.ಯೊಂದನ್ನು ನಿರ್ಮಿಸುತ್ತಿರುವ ಐಆರ್‌ಬಿ. ಕಂಪೆನಿ ಕಳೆದ ಕೆಲವು ದಿನಗಳ ಹಿಂದೆ ನೆಲ ಸಮತಟ್ಟು ಮಾಡಲು ಹೋಗಿ ಎಡವಟ್ಟು ಮಾಡಿದೆ. ಸುತ್ತಮುತ್ತಲಿನ ಕಲುಷಿತ ನೀರು ಸಂಪೂರ್ಣ ಇವರ ಬಾವಿಯ ಕಡೆಗೇ ಬರುವಂತಾಗಿದ್ದು ಘಟನೆಗೆ ಕಾರಣವಾಗಿದೆ. ಅಲ್ಲದೇ ವಿಶೇಷ ಭೂಸ್ವಾಧೀನಾಧಿಕಾರಿಗಳು ಭೂ ಸ್ವಾಧೀನಪಡಿಸಿಕೊಳ್ಳುವಾಗ ಇವರ ಬಾವಿಯನ್ನು ಬಿಟ್ಟು ಬಿಟ್ಟಿದ್ದರೂ, ಇವರ ಬಾವಿಯ ಪಕ್ಕದಲ್ಲಿಯೇ ನಿರ್ಮಿಸುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ಖಾಯಂ ಆಗಿ ಬಾವಿಗೆ ಕೆಸರು ನೀರು ನುಗ್ಗುವ ಭೀತಿ ಇವರನ್ನು ಕಾಡುತ್ತಿದ್ದು ಬಾವಿ ಇದ್ದರೂ ಸಹ ಇಲ್ಲದಂತಾಗುವುದು ಎನ್ನುವುದು ಅವೃತರ ಅಳಲಾಗಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಕೃಷಿಕ ಸಮಾಜದ ಉತ್ತರ ಪ್ರಾಂತ ಪ್ರಮುಖ ಶ್ರೀಧರ ಹೆಬ್ಬಾರ್ ಕಾಮಗಾರಿ ನಡೆಸುತ್ತಿರುವವರೊಂದಿಗೆ ಮಾತನಾಡಿದ್ದು ತಕ್ಷಣ ತಾತ್ಕಾಲಿಕ ಪರಿಹಾರ ಮಾಡಿಕೊಡುವ ಭರವಸೆಯನ್ನು ನೀಡಿದ್ದಾರೆ. ಸಹಾಯಕ ಕಮಿಷನರ್‌ರ ಗಮನಕ್ಕೂ ಕೂಡಾ ವಿಷಯವನ್ನು ತಂದಿದ್ದು ಶನಿವಾರ ಬಂದು ಸ್ಥಳ ಪರಿಶೀಲನೆ ಮಾಡುವ ಭರವಸೆಯನ್ನು ನೀಡಿದ್ದಾರೆನ್ನಲಾಗಿದೆ.
ಸ್ಥಳದಲ್ಲಿ ಸೇರಿದ್ದ ಜನರು ಐಆರ್‌ಬಿ. ಕಂಪೆನಿಯ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದು ತಕ್ಷಣ ತಾಲೂಕಿನಲ್ಲಿ ಮಳೆಗಾಲದಲ್ಲಿ ಎಲ್ಲೆಲ್ಲಿ ನೀರು ತುಂಬಿ ತೊಂದರೆಯಾಗುತ್ತದೆ ಎನ್ನುವ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.
ಪರಿಹಾರ ಕೊಡದೇ ಬಾವಿ ಒತ್ತುವರಿ
ಈಗಾಗಲೇ ರಮಾನಂದ ಅವೃತರಿಗೆ ಜಾಗದ ಬಾಬ್ತು ಪರಿಹಾರವನ್ನು ನೀಡಲಾಗಿದ್ದು ಅದರಲ್ಲಿ ಬಾವಿಯ ಕುರಿತು ಉಲ್ಲೇಖವೇ ಇಲ್ಲವಾಗಿದೆ. ಲಕ್ಷಾಂತರ ರೂ.ಖರ್ಚು ಮಾಡಿ ಬಾವಿಯನ್ನು ಮಾಡಿದ್ದು ಪೈಸೆ ಪರಿಹಾರವನ್ನು ನೀಡದೆ ಬಾವಿಯನ್ನು ಒತ್ತುವರಿ ಮಾಡುತ್ತಿರುವುದು ಚಿಂತೆಗೆ ಕಾರಣವಾಗಿದೆ. ಪರಿಹಾರವನ್ನು ನೀಡಿದರೂ ಈ ರೀತಿಯಾಗಿ ವಿಫುಲವಾಗಿ ನೀರು ದೊರೆಯುವ ಸ್ಥಳ ಬೇರೊಂದಿಲ್ಲ ಎನ್ನುವ ಅವರು, ತಮಗೆ ಇಷ್ಟೇ ನೀರಿರುವ ಇನ್ನೊಂದು ಬಾವಿಯನ್ನು ಕಂಪೆನಿಯೇ ಕೊರೆಸಿ ಕೊಡಲಿ ಎನ್ನುತ್ತಿದ್ದಾರೆ.







