3 ಲಕ್ಷ ಮಕ್ಕಳಿಗೆ ಮಾದಕ ವ್ಯಸನ, ಭಿಕ್ಷಾಟನೆ ಶಿಕ್ಷೆೆ

ದೇಶಾದ್ಯಂತ ಸುಮಾರು ಮೂರು ಲಕ್ಷ ಮಕ್ಕಳನ್ನು ಪ್ರತಿದಿನ ಮಾದಕ ವಸ್ತುಗಳ ಚಟ ಅಂಟಿಸಿ, ಹೊಡೆದು, ಚಿತ್ರಹಿಂಸೆ ನೀಡಿ ಭಿಕ್ಷಾಟನೆಗೆ ಅಟ್ಟಲಾಗುತ್ತಿದೆ. ಭಿಕ್ಷಾಟನೆ ಎನ್ನುವುದು ಇಂದು ಬಹುಕೋಟಿ ಉದ್ಯಮವಾಗಿ ಬೆಳೆದಿದ್ದು, ಮಾನವ ಕಳ್ಳಸಾಗಣೆದಾರ ಒಕ್ಕೂಟದಿಂದ ನಿಯಂತ್ರಿಸಲ್ಪಡುತ್ತಿದೆ ಎನ್ನುತ್ತಾರೆ ಪೊಲೀಸರು ಮತ್ತು ಕಳ್ಳ ಸಾಗಣೆ ದಂಧೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುವ ತಜ್ಞರು. ಈ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಲಾಗಿದ್ದು, ದೇಶದ ಎಲ್ಲ ಪೊಲೀಸ್ ಇಲಾಖೆಗಳಿಗೆ ಇದನ್ನು ಕಳುಹಿಸಲು ನಿರ್ಧರಿಸಲಾಗಿದೆ. ಈ ವರದಿ ಸಿದ್ಧಪಡಿಸಿದ ತಜ್ಞರು, ಬೀದಿಬದಿ ವಾಸವಾಗಿರುವ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ದೇಶದಲ್ಲಿ ಪ್ರತೀ ವರ್ಷ 40 ಸಾವಿರ ಮಕ್ಕಳನ್ನು ಅಪಹರಿಸಲಾಗುತ್ತದೆ. ಈ ಪೈಕಿ ಕನಿಷ್ಠ 11 ಸಾವಿರ ಮಂದಿ ಪತ್ತೆಯೇ ಆಗುವುದಿಲ್ಲ.
‘‘ಪೊಲೀಸರು ಮಕ್ಕಳ ಭಿಕ್ಷಾಟನೆಯನ್ನು ದೊಡ್ಡ ಸಮಸ್ಯೆ ಎಂದು ಪರಿಗಣಿಸುವುದೇ ಇಲ್ಲ. ಏಕೆಂದರೆ ಆ ಮಗುವಿನ ಜತೆ ಇರುವ ವಯಸ್ಕರು ಆ ಮಗುವಿನ ಕುಟುಂಬದವರು ಅಥವಾ ಕುಟುಂಬಕ್ಕೆ ಪರಿಚಯಸ್ಥರು ಎಂದು ಪೊಲೀಸರು ಇಂಥ ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ’’ ಎಂದು ಮಕ್ಕಳ ಕಳ್ಳ ಸಾಗಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ರೀಡಂ ಪ್ರಾಜೆಕ್ಟ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಕಾರಿ ಮತ್ತು ಈ ವರದಿಯ ಸಹ ಲೇಖಕಿ ಅನಿತಾ ಕನ್ಹಯ್ಯ್ ವಿವರಿಸುತ್ತಾರೆ.
‘‘ಆದರೆ, ರಕ್ಷಿಸಲ್ಪಡುವ ಪ್ರತಿ 50 ಮಕ್ಕಳ ಪೈಕಿ ಕನಿಷ್ಠ 10 ಮಕ್ಕಳು ಕಳ್ಳಸಾಗಣೆ ದಂಧೆಯ ಸಂತ್ರಸ್ತರು. ಈ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಹಚ್ಚಲು ನಿರಂತರವಾದ ಜಾಗೃತಿ ವಹಿಸುವುದು ಅಗತ್ಯವಾಗಿದೆ’’ ಎಂದು ಥಾಮ್ಸನ್ಸ್ ರಾಯ್ಟರ್ ೌಂಡೇಷನ್ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ಮಕ್ಕಳನ್ನು ಅಂಗಹೀನ ಮಾಡುವುದು ಹಾಗೂ ಕೆಲ ಅಂಗಾಂಗಗಳನ್ನು ಸುಡುವ ಮೂಲಕ ಸಾರ್ವಜನಿಕರಲ್ಲಿ ಹೆಚ್ಚಿನ ಅನುಕಂಪ ಹುಟ್ಟಿಸಿ, ಹೆಚ್ಚು ಭಿಕ್ಷೆ ಪಡೆಯುವ ತಂತ್ರವನ್ನೂ ಅನುಸರಿಸಲಾಗುತ್ತದೆ ಎಂದು ವರದಿ ವಿವರಿಸಿದೆ.
ಇಂಥ ಬೀದಿಮಕ್ಕಳು ಗಳಿಸಿದ ಹಣವನ್ನು ಸಾಮಾನ್ಯವಾಗಿ ಕಳ್ಳಸಾಗಣೆದಾರರಿಗೆ ನೀಡಲಾಗುತ್ತದೆ ಇಲ್ಲವೇ ಆಲ್ಕೋಹಾಲ್ ಮತ್ತು ಮಾದಕ ವಸುಗಳ ಖರೀದಿಗೆ ಬಳಸಲಾಗುತ್ತದೆ. ಬೆಂಗಳೂರಿನ ಪೊಲೀಸರು ಹಾಗೂ ಸೇವಾ ಸಂಸ್ಥೆಗಳ ಅನುಭವ ಹಾಗೂ ಮಾಹಿತಿ ಆಧರಿಸಿ, ಈ ವರದಿ ಸಿದ್ಧಪಡಿಸಲಾಗಿದೆ.
ಪೊಲೀಸರೇ ಹೇಳುವಂತೆ ಭಿಕ್ಷಾಟನೆಗೆ ಆಯಾ ಋತುಮಾನಕ್ಕೆ ಅನುಗುಣವಾಗಿ ವಿಭಿನ್ನ ತಂತ್ರಗಳನ್ನು ಅನುಸರಿಸಲಾಗುತ್ತದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಕೆಲ ಹಬ್ಬಗಳ ಸಂದರ್ಭದಲ್ಲಿ ಮತ್ತು ಕೆಲ ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ರಸ್ತೆಯಲ್ಲಿ ಅಲೆದಾಡುತ್ತಾ ಭಿಕ್ಷೆ ಬೇಡುವ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ ಎಂದು ಅವರು ವಿವರಿಸುತ್ತಾರೆ.
ಬೆಂಗಳೂರಿನಲ್ಲಿ 2011ರಲ್ಲಿ ‘ಆಪರೇಷನ್ ರಕ್ಷಣೆ’ ಎಂಬ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಹಲವು ಸರಕಾರಿ ಇಲಾಖೆಗಳು ಹಾಗೂ ದತ್ತಿ ಸೇವಾ ಸಂಸ್ಥೆಗಳ ಸಹಕಾರದಿಂದ ಭಿಕ್ಷಾಟನೆ ದಂಧೆಗೆ ತಳ್ಳಲ್ಪಟ್ಟ ಮಕ್ಕಳ ರಕ್ಷಣೆಗಾಗಿ ನೀಲಿನಕಾಶೆ ಸಿದ್ಧಪಡಿಸಲಾಯಿತು.
ಗಂಭೀರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸುವ ಕೆಲ ತಿಂಗಳುಗಳಿಗೆ ಮುನ್ನವೇ, ನಗರದಾದ್ಯಂತ ಅಡ್ಡಾಡಿ, ಬೀದಿ ಮಕ್ಕಳ ೆಟೊ ಸೆರೆ ಹಿಡಿಯುವುದು, ಅವರ ದೈನಂದಿನ ಚಟುವಟಿಕೆಗಳನ್ನು ದಾಖಲೀಕರಿಸುವುದು ಹಾಗೂ ಅವರನ್ನು ಮತ್ತೆ ಮನೆಗಳಿಗೆ ಕಳುಹಿಸುವಂಥ ಚಟುವಟಿಕೆಗಳು ವ್ಯಾಪಕವಾಗಿ ನಡೆದವು.
‘‘ನಾವು ಈ ಪರಿಹಾರ ಕಾರ್ಯಾಚರಣೆ ಆರಂಭಿಸಿದಾಗ, ಭಿಕ್ಷಾಟನೆ ಹಾಗೂ ಮಾನವ ಕಳ್ಳಸಾಗಣೆಗೆ ಸಂಬಂಧವಿದೆ ಎಂದು ನಿರೂಪಿಸುವ ಯಾವ ಪುರಾವೆಗಳೂ ಸಿಗಲಿಲ್ಲ. ಆದರೆ ನಗರದ ಬೀದಿಗಳಲ್ಲಿ ಯಾವುದೇ ಬಗೆಯ ಬಲಾತ್ಕಾರದ ಭಿಕ್ಷಾಟನೆಯ ಸೂಚನೆ ಕಾಣುತ್ತಿದೆಯೇ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಭಿಕ್ಷಾಟನೆಯ ಕರಾಳ ಮುಖ ಬೆಳಕಿಗೆ ಬಂತು’’ ಎಂದು ಕನ್ಹಯ್ಯಿ ವಿವರಿಸುತ್ತಾರೆ.
ಪೊಲೀಸ್ ತಂಡ, ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು ಸಂಘಟಿತ ಶ್ರಮ ವಹಿಸಿ ನಡೆಸಿದ ಕಾರ್ಯಾಚರಣೆ ಯಲ್ಲಿ ಒಂದೇ ದಿನ 300ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಲಾಗಿದ್ದು, ಇದರ ನೇತೃತ್ವ ವಹಿಸಿದ್ದ ಇನ್‌ಸ್ಪೆಕ್ಟರ್ ಜನರಲ್ ಆ್ ಪೊಲೀಸ್ ಪ್ರಣವ್ ಮೊಹಾಂತಿ ಅವರ ಪ್ರಕಾರ, ‘‘ ಈ ಕಾರ್ಯಾಚರಣೆ ಬಳಿಕ ಹಲವು ಮಂದಿ ಮಾನವ ಕಳ್ಳಸಾಗಣೆದಾರರನ್ನು ಪತ್ತೆ ಮಾಡಿ, ಜೈಲಿಗೆ ಅಟ್ಟಲಾಗಿದೆ. ಆಪರೇಷನ್ ರಕ್ಷಣೆ ಕಾರ್ಯಾಚರಣೆಯನ್ನು ಇತರ ಎಲ್ಲ ಕಡೆಗಳಲ್ಲಿ ಕೈಗೊಳ್ಳಲು ಪರಸ್ಪರ ಏಜೆನ್ಸಿಗಳ ಸಹಕಾರ ಮಾದರಿಯಾಗಿ ಬಳಸಿಕೊಳ್ಳಲು ಅವಕಾಶವಿದೆ’’ ಎಂದು ಮೊಹಾಂತಿ ಕಿರುಹೊತ್ತಗೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ಮೇಲ್ವಿಚಾರಣೆ, ಮಾಹಿತಿ ಸಂಗ್ರಹ ಹಾಗೂ ಪುನರ್ವಸತಿಯಂಥ ಸಲಹೆಗಳು ಒಳಗೊಂಡಿವೆ. ಜತೆಗೆ ಇದಕ್ಕೆ ಸಂಬಂಧಪಟ್ಟ ಪ್ರಸ್ತುತ ಎನಿಸಿದ ಕಾನೂನುಗಳನ್ನು ಕೂಡಾ ಇದರಲ್ಲಿ ಪಟ್ಟಿ ಮಾಡಲಾಗಿದೆ.
‘‘ಇದೀಗ ಈ ಕಿರುಹೊತ್ತಗೆಯನ್ನು ದೇಶದ ಎಲ್ಲ ಪೊಲೀಸ್ ಕೇಂದ್ರ ಕಚೇರಿಗಳಿಗೂ ಒಯ್ದು, ಈ ಬಗ್ಗೆ ಯೋಜಿತ ಪ್ರಚಾರಾಂದೋಲನ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳ ಭಿಕ್ಷಾಟನೆ ಹಾಗೂ ಪರಿಹಾರ ಕಾರ್ಯಾಚರಣೆ ಎಂಬ ಕಾರ್ಯಾಗಾರವನ್ನೂ ಪೊಲೀಸರಿಗೆ ಆಯೋಜಿಸಲು ನಿರ್ಧರಿಸಿದ್ದೇವೆ’’ ಎಂದು ಕನ್ಹಯ್ಯೆ ವಿವರಿಸುತ್ತಾರೆ.







