ಸರಕಾರಿ ನೌಕರರ ಹಿತ ಕಾಯುವಲ್ಲಿ ಸಿಎಂ ವಿಫಲ: ಹೊಳೆಲಿಂಗಪ್ಪ

ಸೊರಬ, ಜೂ.2: ರಾಜ್ಯ ಸರಕಾರಿ ನೌಕರರ ಹಿತ ಕಾಯುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ವಿಫಲವಾಗಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಎಂ.ಡಿ ಹೊಳೆಲಿಂಗಪ್ಪಆರೋಪಿಸಿದರು.
ಗುರುವಾರ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸರಕಾರಿ ನೌಕರರ ಮಾದರಿಯಲ್ಲಿಯೇ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಒಂದು ದಿನದ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರ ಈಗಾಗಲೇ 2016 ಜನವರಿ 1ರಿಂದ ಅನ್ವಯವಾಗುವಂತೆ 7ನೆ ವೇತನ ಆಯೋಗದ ಶಿಫಾರಸಿನಂತೆ ನೌಕರರ ವೇತನ, ಭತ್ತೆಗಳನ್ನು ಕನಿಷ್ಠ ಶೇ.23.55ರಷ್ಟು ಹೆಚ್ಚಿಸಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ಕನಿಷ್ಠ ಶೇ.44.06 ಹಾಗೂ ಗರಿಷ್ಠವೆಂದರೆ ಶೇ.111.33 ರಷ್ಟು ವೇತನ ನೀಡಬೇಕು. ಆದರೆ, ಕೇಂದ್ರದ ನೌಕರರಿಗೆ ದೊರೆಯುತ್ತಿರುವ ವೇತನ ಹೆಚ್ಚಳ ರಾಜ್ಯ ಸರಕಾರಿ ನೌಕರರಿಗೆ ದೊರೆಯುತ್ತಿಲ್ಲ. ನೌಕರರ ಹಿತರಕ್ಷಣೆ ಕುರಿತು ರಾಜ್ಯ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಅವರು ಆರೋಪಿಸಿದರು.
ರಾಜ್ಯ ಸರಕಾ, ಜಾರಿಗೆ ತರುತ್ತಿರುವ ಹಲವು ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಸಿಬ್ಬಂದಿಯ ಕೊರತೆಯ ನಡುವೆಯೂ ಸರಕಾರಿ ನೌಕರರಿಂದಲೇ ಆಗುತ್ತಿದೆ. ಆದರೆ, ಹಲವು ಒತ್ತಡಗಳ ಸಂದರ್ಭದಲ್ಲಿಯೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಸರಕಾರಿ ನೌಕರರನ್ನು ಸರಕಾರ ನಿರ್ಲಕ್ಷಿಸುತ್ತಿದೆ. ದೇಶದ 30 ರಾಜ್ಯಗಳ ಪೈಕಿ 24 ರಾಜ್ಯಗಳಲ್ಲಿ ಸರಕಾರಿ ನೌಕರರು ಕೇಂದ್ರ ಸರಕಾರದ ಮಾದರಿಯಲ್ಲೇ ವೇತನ ಪಡೆಯುತ್ತಿದ್ದಾರೆ. ಆ ರೀತಿ ವೇತನ ಪಡೆಯದ ಆರು ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವೂ ಸಹ ಒಂದಾಗಿದೆ. ಆರನೆ ವೇತನ ಆಯೋಗದ ವರದಿಯಲ್ಲೇ ರಾಜ್ಯ ಸರಕಾರಿ ನೌಕರರಿಗೆ ಅನ್ಯಾಯವಾಗಿದ್ದು, ಈಗ ಸರಕಾರಿ ನೌಕರರಿಗೆ ಏಳನೆ ವೇತನ ಆಯೋಗ ಇನ್ನು ಜಾರಿಯಾಗದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಪ್ರಕಾಶ್ ಮಡ್ಲೂರ್ ಮಾತನಾಡಿ, ಸರಕಾರದ ಯಾವುದೇ ಬೆದರಿಕೆಗಳಿಗೆ ಜಗ್ಗದೆ ನಮ್ಮ ಬೇಡಿಕೆ ಈಡೇರುವವರೆಗೂ ನಿರಂತರ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಮಂಭಾಗದಿಂದ ಮುಖ್ಯ ರಸ್ತೆ ಮಾರ್ಗವಾಗಿ ವಿವಿಧ ಇಲಾಖೆಯ ನೌಕರರು ಮೆರವಣಿಗೆ ನಡೆಸಿ ನಂತರ ತಾಲೂಕು ಕಚೇರಿ ಆವರಣದಲ್ಲಿ ಬೃಹತ್ ಸಭೆ ನಡೆಸಿ, ತಹಶೀಲ್ದಾರ್ ಕವಿತಾ ಯೋಗಪ್ಪನವರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿವಪ್ರಸಾದ್, ಲೋಕ್ಯಾನಾಯ್ಕ್ಕಾ, ರವಿಪ್ರಕಾಶ್, ಚಂದ್ರನಾಯ್ಕಾ, ಭಾರತಿ ಹಿಂಡೇರ, ಕೆ.ಸಿ ಶಿವಕುಮಾರ್, ಬಸವರಾಜ್, ಅಪ್ಪಾಜಿ, ನೀಲಪ್ಪ, ಆನಂದಪ್ಪ, ಇಂದೂಧರ್ ಪಾಟೀಲ್, ಸಂಪತಕುಮಾರ್, ನಾಗಪ್ಪ ಪ್ರೊ.ರಾಜಪ್ಪ, ದೀಪಕ್, ಕೃಷ್ಣಪ್ಪ, ಆರ್.ಎಸ್. ಮಿರ್ಜಿ, ಗಣಪತಿ, ಗಣಪತಿ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.







