ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಜಾಗ ಗುರುತು

ಮೂಡಿಗೆರೆ, ಜೂ.2: ಪಟ್ಟಣದ ಹೃದಯ ಭಾಗದಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಈಗಾಗಲೇ ಜಾಗ ಗುರುತಿಸಲಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದ್ದಾರೆ.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ವಾಹನ ದಟ್ಟಣೆ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ವಿದ್ಯಾನಗರದಲ್ಲಿ ಶುಕ್ರವಾರ ನಡೆಯುವ ಸಂತೆಯಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಓದಿಗೆ ತೊಂದರೆಯುಂಟಾಗುವ ದೂರುಗಳಿವೆ. ಆದ್ದರಿಂದ ಸಂತೆಯನ್ನು ಅದೇ ಸ್ಥಳದಲ್ಲಿ ರವಿವಾರ ನಡೆಸಲು ಜನಾಭಿಪ್ರಾಯ ಪಡೆದು ನಿರ್ಧರಿಸಲಾಗುವುದು ಅಥವಾ ಸಂತೆಯ ಸ್ಥಳಾಂತರಗೊಳಿಸಲು ಜಾಗವನ್ನು ಗುರುತಿಸಲಾಗುವುದು ಎಂದರು.
ಕೆ.ಎಂ.ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ರುವುದರಿಂದ ಬೈಪಾಸ್ ರಸ್ತೆ ಅಥವಾ ಈ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರವೇ ಅಗಲಗೊಳಿಸುತ್ತದೆ. ಪಟ್ಟಣದ ರಸ್ತೆ ಅಭಿವೃದ್ಧಿಗೆ ಸರಕಾರದಿಂದ 5ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಈ ಹಣದಲ್ಲಿ ಪಟ್ಟಣದ ಎಲ್ಲ ಬಡಾವಣೆಗಳ ರಸ್ತೆಗಳಿಗೂ ಕಾಂಕ್ರಿಟೀಕರಣಗೊಳಿಸಲಾಗುವುದು. ಎಂ.ಜಿ.ರಸ್ತೆ, ಪಿ.ಟಿ.ರಸ್ತೆ, ಜೆ.ಎಂ.ರಸ್ತೆ, ತತ್ಕೊಳ ರಸ್ತೆ ಅಗಲೀಕರಣಕ್ಕೆ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಟ್ರಾಕ್ಟರ್ ಹಾಗೂ ಟಿಪ್ಪರ್‌ಗಳ ಚಾಲಕರು ಮನಸೋ ಇಚ್ಛೆಯಂತೆ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳಲ್ಲೂ ಮರಳು ಹಾಗೂ ಜೆಲ್ಲಿಯನ್ನು ನಡು ರಸ್ತೆಗೆ ಸುರಿದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾಕ್ಟರ್ ಹಾಗೂ ಟಿಪ್ಪರ್ ಮತ್ತು ಟಿಲ್ಲರ್‌ಗಳಂತ ವಾಹನಗಳನ್ನು ಹಗಲು ಪಟ್ಟಣದ ಸಣ್ಣಪುಟ್ಟ ಸ್ಥಳಗಳಲ್ಲಿ ರಸ್ತೆಗಳಲ್ಲಿ ಸಂಚರಿಸುವುದನ್ನು ತಡೆಯಬೇಕಾಗಿದೆ. ಮೂಡಿಗೆರೆ ಬಸ್ ನಿಲ್ದಾಣ ಹಾಗೂ ಕೊಟ್ಟಿಗೆಹಾರದಲ್ಲಿ ಪೊಲೀಸ್ ಚೌಕಿ ನಿರ್ಮಿಸಬೇಕು. ವಾಹನ ದಟ್ಟಣೆ ನಿರ್ವಹಣೆಗೆ ಟ್ರಾಫಿಕ್ ಪೊಲೀಸ್ ನಿಯೋಜಿಸಬೇಕು. ಕೊರತೆ ಇರುವ ಪೊಲೀಸ್ ಠಾಣೆಗಳಿಗೆ ಸಿಬ್ಬಂದಿ ನಿಯೋಜಿಸಬೇಕು ಎಂದು ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯ ಕಿರುಗುಂದ ಅಬ್ಬಾಸ್ ಸಭೆಯಲ್ಲಿ ಒತ್ತಾಯಿಸಿದರು.
ಅರಣ್ಯ ಇಲಾಖೆ ಕಚೇರಿಯಿಂದ ಪೊಲೀಸ್ ಠಾಣೆವರೆಗೆ ಕಾರು ಮತ್ತು ಬೈಕ್‌ಗಳಿಗೆ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕವಳ್ಳಿ ರಮೇಶ್ ಆಗ್ರಹಿಸಿದರು.
ಸಭೆಯಲ್ಲಿ ಸಾರ್ವಜನಿಕರ ಸಮಗ್ರ ಅಭಿಪ್ರಾಯ ಪಡೆಯುವ ಮೂಲಕ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಒಮ್ಮತದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಟಿ.ಎ.ಮದೀಶ್, ಸದಸ್ಯೆ ಪೂರ್ಣಿಮಾ ಮಲ್ಯ, ವೃತ್ತ ನಿರೀಕ್ಷಕ ಜಗದೀಶ್, ಪಿಎಸೈ ಗವಿರಾಜ್, ಪಿಡಬ್ಲ್ಯೂಡಿ ಇಂಜಿನಿಯರ್ ಎ.ಸಿ.ಹಳಿಮನಿ, ಪತ್ರಕರ್ತ ಸಂಘದ ಅಧ್ಯಕ್ಷ ನಯನ ತಳವಾರ, ಮುಸ್ಲಿಮ್ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಮುಹಮ್ಮದ್ ಶಬ್ಬೀರ್, ಗಣೇಶ್, ಸುದೀರ್, ಕಾಂಗ್ರೆಸ್ ಮುಖಂಡ ಬೆಟ್ಟಗೆರೆ ಮನೋಜ್, ಬಿಜೆಪಿ ಮುಖಂಡ ಹೆಸಗಲ್ ಗಿರೀಶ್, ಬಿಎಸ್ಪಿ ತಾಲೂಕು ಕಾರ್ಯದರ್ಶಿ ರಾಮು, ಸಮಾಜ ಸೇವಕ ಫಿಶ್ ಮೋಣು, ಜಯಕರ್ನಾಟಕ ಸಂಘದ ಅಧ್ಯಕ್ಷ ಸುದೀರ್ ಮತ್ತಿತರರು ಉಪಸ್ಥಿತರಿದ್ದರು.







