ಜಿಲ್ಲೆಯಾದ್ಯಂತ ಸರಕಾರಿ ನೌಕರರ ಮುಷ್ಕರ ಯಶಸಿ್ವ
ಚಿಕ್ಕಮಗಳೂರು, ಜೂ.2: ಕೇಂದ್ರ ಸರಕಾರಿ ನೌಕರರಿಗೆ ದೊರೆಯುತ್ತಿರುವ ವೇತನ ಮತ್ತು ಇತರೆ ಭತ್ತೆಗಳಿಗೆ ಸಮಾನವಾದ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸರಕಾರಿ ನೌಕರರು ಗುರುವಾರ ನಡೆಸಿದ ಒಂದು ದಿನದ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳು ಹೊರತುಪಡಿಸಿ ರಾಜ್ಯ ಸರಕಾರಿ ಕಚೇರಿ ವಹಿವಾಟುಗಳು ಪೂರ್ಣ ಸ್ಥಗಿತಗೊಂಡಿದ್ದವು.
ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದು, ಮುಷ್ಕರದ ಮಾಹಿತಿ ಈ ಮೊದಲೇ ದೊರೆತ್ತಿದ್ದರಿಂದ ಸಾರ್ವಜನಿಕರು ಕೂಡ ಸರಕಾರಿ ಕಚೇರಿಗಳತ್ತ ಸುಳಿಯಲಿಲ್ಲ. ನಗರದಲ್ಲಿ ಎಲ್ಲ ಸರಕಾರಿ ಕಚೇರಿಗಳನ್ನೂ ಮುಚ್ಚಲಾಗಿದ್ದು, ತಾಲೂಕು ಕಚೇರಿ ಸೇರಿದಂತೆ ನಾಡ ಕಚೇರಿಗಳಲ್ಲಿ ಗುತ್ತಿಗೆ ನೌಕರರಿಂದ ನಿರ್ವಹಿಸಲ್ಪಡುವ ನೆಮ್ಮದಿ ಕೇಂದ್ರಗಳು ತೆರೆದಿದ್ದವು.
ಅನೇಕ ಸರಕಾರಿ ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಮುಚ್ಚಿದ್ದರೆ, ಕೆಲವು ಶಾಲೆಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಂದಿದ್ದರಾದರೂ ಬಾಗಿಲು ತೆರೆಯಲು ಬೀಗದ ಕೀ ಮುಖ್ಯೋಪಾಧ್ಯಾಯರ ಬಳಿ ಇದ್ದು ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಹಿಂದಿರುಗಿದರು ಎಂದು ವರದಿಯಾಗಿದೆ.
ನಗರಸಭಾ ಕಚೇರಿಯಲ್ಲಿ ಬೆಳಗ್ಗೆ ಸುಮಾರು 11:30ರವರೆಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರಾ ದರೂ ನಂತರ ಪೌರನೌಕರರು ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಮುಷ್ಕರಕ್ಕೆ ಬೆಂಬಲ ನೀಡುವ ನಿರ್ಧಾರ ತೆಗೆದುಕೊಂಡ ಪರಿಣಾಮ ಕೆಲಸ ಸ್ಥಗಿತಗೊಳಿಸಿ ಹೊರನಡೆದರು. ಗುತ್ತಿಗೆ ಆಧಾರದ ಸಿಬ್ಬಂದಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಿದರು ಎಂದು ಹೇಳಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎರಡು ಎಸಿ ಕಚೇರಿ ಸೇರಿದಂತೆ ಜಿಲ್ಲೆಯ ಎರಡು ಉಪವಿಭಾಗಾಧಿಕಾರಿಗಳ ಕಚೇರಿ ನರಸಿಂಹರಾಜಪುರ ಹೊರತುಪಡಿಸಿದ ಎಲ್ಲ ತಾಲೂಕು ಕಚೇರಿಗಳು, ಜಿಲ್ಲಾಡಳಿತ ಮತ್ತು ಜಿಪಂ ವ್ಯಾಪ್ತಿಯ ಸರಕಾರಿ ಕಚೇರಿ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದರು.
ಬೆಳಗ್ಗೆ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಕಚೇರಿಗೆ ಆಗಮಿಸಿದರಾದರೂ ಕಚೇರಿ ಬಾಗಿಲು ಮುಚ್ಚಿದ್ದರಿಂದ ಕೆಲ ಸಮಯ ಹೊರಗುಳಿದಿದ್ದು ನಂತರ ಡಿ ದರ್ಜೆ ನೌಕರರು ಆಗಮಿಸಿ ಕಚೇರಿ ಬಾಗಿಲು ತೆರೆದರು. ಜಿಲ್ಲೆಯ ಬಹುತೇಕ ಸರಕಾರಿ ವಾಹನ ಚಾಲಕರು ಕರ್ತವ್ಯಕ್ಕೆ ಗೈರುಹಾಜರಾಗಿದ್ದರೆ, ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡ ಚಾಲಕರು ಮಾತ್ರ ಅಧಿಕಾರಿಗಳ ಓಡಾ ಟಕ್ಕೆ ವಾಹನ ಒದಗಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಸೇರಿದಂತೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರಾದರೂ ಹಾಜರಾತಿಗೆ ಸಹಿಹಾಕದೆ ಕಪ್ಪು ಬಟ್ಟೆ ಧರಿಸಿ ಒಂದೆಡೆ ಸರಕಾರಿ ನೌಕರರ ಮುಷ್ಕರವನ್ನು ಬೆಂಬಲಿಸುವ ಜೊತೆಗೆ ತಮ್ಮ ಬೇಡಿಕೆ ಈಡೇರಿಸಬೇಕೆಂಬ ಮನವಿಯನ್ನು ಪರೋಕ್ಷವಾಗಿ ಸರಕಾರಕ್ಕೆ ಸಲ್ಲಿಸಿದರು.
ಉಳಿದಂತೆ ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯರು ಇತರೆ ಸಿಬ್ಬಂದಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಎಂದಿನಂತೆ ಕಾರ್ಯ ನಿರ್ವಹಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.
ನರಸಿಂಹರಾಜಪುರಕ್ಕೆ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕಾಗಿ ನಾಳೆ ಮುಖ್ಯಮಂತ್ರಿ ಆಗಮಿಸಲಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸೇರಿದಂತೆ ಹಲವಾರು ಇಲಾಖೆಗಳು ಇಂದು ಚಟುವಟಿಕೆಯಿಂದ ಕೂಡಿದ್ದು, ನಾಳಿನ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಿತು. ಸರಕಾರಿ ನೌಕರರೊಂದಿಗೆ ಆಡಳಿತ ಮತ್ತು ವಿಪಕ್ಷದ ಮುಖಂಡರ ಓಡಾಟವೂ ಜೋರಾಗಿದ್ದು, ಹೀಗಾಗಿ ಸರಕಾರಿ ನೌಕರರ ಮುಷ್ಕರದ ಬಿಸಿ ಕಂಡು ಬರಲಿಲ್ಲ.







