ಸರಕಾರಿ ಶಾಲೆಗಳು ತಿರಸ್ಕಾರ ತಪ್ಪು: ಶಾಸಕ ದತ್ತ

ಕಡೂರು, ಜೂ.2: ಕಡೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 600ಅಂಕಗಳನ್ನು ಪಡೆಯುವ ಮೂಲಕ ಜಿತೇಂದ್ರ ಎಂಬ ವಿದ್ಯಾರ್ಥಿ ರಾಜ್ಯದಲ್ಲೇ 5ನೆ ಸ್ಥಾನ ಪಡೆದು ಕಡೂರು ಶಾಲೆಗೆ ಕೀರ್ತಿ ತಂದಿದ್ದಾನೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಅವರು ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಚೇರಿಯಲ್ಲಿ ಎಸೆಸೆಲ್ಸಿಯಲ್ಲಿ 621ಅಂಕಗಳನ್ನು ಪಡೆದು ಜಿಲ್ಲೆಗೆ 2ನೆ ಸ್ಥಾನ, ಕಡೂರು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಈ ವಿದ್ಯಾರ್ಥಿ ಮುಂದಿನ ವ್ಯಾಸಂಗಕ್ಕಾಗಿ ಬೇರೆಡೆ ತೆರಳುವ ಸಂದರ್ಭದಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡುವುದಲ್ಲದೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಾರಂಭಿಕವಾಗಿ 5000 ರೂ. ನೀಡಲಾಗಿದೆ ಎಂದರು. ಸರಕಾರಿ ಶಾಲೆಗಳು ಎಂದರೆ ಜನರಲ್ಲಿ ತಿರಸ್ಕಾರ ಭಾವನೆ ಮೂಡುತ್ತಿದ್ದು, ಅತಿ ಹೆಚ್ಚಾಗಿ ಬಾಲಕರನ್ನು ಖಾಸಗಿ ಶಾಲೆಗಳಿಗೆ ಹೆಚ್ಚು ಡೊನೇಷನ್ ನೀಡುವುದರ ಮೂಲಕ ತಮ್ಮ ಮಕ್ಕಳನ್ನು ಸೇರಿಸಲು ಮುಗಿ ಬೀಳುವ ಕಾಲದಲ್ಲಿ ಸರಕಾರಿ ಶಾಲೆಗಳಲ್ಲೂ ಉತ್ತಮವಾದ ಪಾಠ ಮಾಡಲಾಗುತ್ತಿದೆ ಈ ವಿದ್ಯಾರ್ಥಿಗಳ ಸಾಧನೆಯಿಂದ ಸಾಬೀತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲೆ ಶೀಲಾ, ಕೋಡಿಹಳ್ಳಿ ಮಹೇಶ್, ಕೆ.ಎಸ್.ರಮೇಶ್, ಭಂಡಾರಿ ಶ್ರೀನಿವಾಸ್, ಶಾಲಾ ಸಿಬ್ಬಂದಿ, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.





