ಜೂ. 5ರಂದು ಸಸಿ ನೆಡುವ ಸಪ್ತಾಹಕ್ಕೆ ಚಾಲನೆ
ವಿಶ್ವ ಪರಿಸರ ದಿನಾಚರಣೆ: ಜಿಲ್ಲೆಯಲ್ಲಿ 1.45ಲಕ್ಷ ಸಸಿಗಳನ್ನು ನೆಡುವ ಗುರಿ

ಮಡಿಕೇರಿ ಜೂ.2: ಜಿಲ್ಲಾ ಪಂಚಾಯತ್ ಮತ್ತು ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಸಸಿ ನೆಡುವ ಸಪ್ತಾಹಕ್ಕೆ ಜೂ. 5ರಂದು ಚಾಲನೆ ದೊರೆಯಲಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡಕುಂಡಲು ಅವರು ತಿಳಿಸಿದ್ದಾರೆ.
ನಗರದ ಅರಣ್ಯ ಭವನ ಸಬಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಪಂ ಸಿಇಒ ಚಾರುಲತಾ ಸೋಮಲ್ ಜೂ. 5ರಂದು ಬೆಳಗ್ಗೆ 8ಗಂಟೆಗೆ ಗುಡ್ಡೆ ಹೊಸೂರು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ಗಿಡ ನೆಡುವ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತಿತರರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾವೇರಿ ನದಿ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ, ಸರಕಾರಿ ಕಚೇರಿಗಳ ಸುತ್ತ ಮುತ್ತಲಿನ ಸ್ಥಳಗಳಲ್ಲಿ ನೆಲ್ಲಿ, ಹೊಂಗೆ, ಮಹಾಗನಿ, ನೇರಳೆ, ಮಾವು, ಸಪೋಟ, ಕಿತ್ತಳೆ, ನಿಂಬೆ, ಹುಣಸೆ, ಬಿದಿರು ಮತ್ತಿತರ ಸ್ಥಳೀಯ ಬೇಡಿಕೆ ಇರುವ ಗಿಡಗಳನ್ನು ನೆಡಲಾಗುತ್ತದೆ. ಜಿಲ್ಲೆಯ 104 ಗ್ರಾಪಂ ಗಳಲ್ಲಿ 1,500ರಿಂದ 2ಸಾವಿರ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಚಾರುಲತಾ ಸೋಮಲ್ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಬೇಡಿಕೆ ಇರುವ ಗಿಡಗಳನ್ನು ಬೆಳೆಸಿ ಜಿಲ್ಲೆಯಲ್ಲಿ ಅರಣ್ಯ ಮತ್ತು ಪರಿಸರ ಸಮೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಇಲ್ಲಿನ ಪರಿಸರಕ್ಕೆ ಪೂರಕವಾಗಿರುವ ಗಿಡಗಳನ್ನು ನೆಟ್ಟು ಅಂತರ್ಜಲ ಸಂರಕ್ಷಣೆಗೆ ಗಮನಹರಿಸಲಾಗುವುದು. ಇದೇ ಜೂ. 8ರಂದು ಕೇಂದ್ರ ಪರಿಸರ ಶಿಕ್ಷಣ ಸಂಸ್ಥೆ ವತಿಯಿಂದ ನಿಸರ್ಗಧಾಮದಲ್ಲಿ ಕಾವೇರಿ ನದಿ ಸಂರಕ್ಷಣೆ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಡಕುಂಡಲು ಮಾತನಾಡಿ, ಸರಕಾರ ಸಾಮಾಜಿಕ ಅರಣ್ಯ ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದು, ಆ ನಿಟ್ಟಿನಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ 1.45ಲಕ್ಷ ಸಸಿಗಳನ್ನು ನೆಡುವ ಗುರಿ:
ಜಿಲ್ಲೆಯ ಪ್ರಮುಖ ನದಿಗಳಾದ ಕಾವೇರಿ ಹಾಗೂ ಲಕ್ಷ್ಮಣತೀರ್ಥ ಮತ್ತಿತರ ಪ್ರಮುಖ ನದಿಗಳ ದಂಡೆಗಳಲ್ಲಿ ಮತ್ತು ತೊರೆಗಳ, ಕಾಲುವೆಗಳ ದಂಡೆಯಲ್ಲಿ ಸಾಲುತೋಪು ಸಸಿಗಳನ್ನು ನೆಡುವುದು ಹಾಗೂ ಶಾಲಾ, ಕಾಲೇಜು, ಅಂಗನವಾಡಿ ಮತ್ತು ಸರಕಾರಿ ಕಟ್ಟಡಗಳ ಸುತ್ತಮುತ್ತ ಸಸಿಗಳನ್ನು ನೆಡುವುದು ಹಾಗೂ ಅರಣ್ಯ ಬುಡಕಟ್ಟು ಹಕ್ಕುಪತ್ರ ಹೊಂದಿರುವ ಜಾಗಗಳಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜಮೀನುಗಳಲ್ಲಿ ಸಸಿಗಳನ್ನು ನೆಡಲು ಪೂರ್ವ ತಯಾರಿ ನಡೆಸಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಅಂದಾಜು 43ಸಾವಿರ ಸಸಿಗಳನ್ನು ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ 47ಸಾವಿರ ಮತ್ತು ವೀರಾಜಪೇಟೆ ತಾಲೂಕಿನಲ್ಲಿ 55ಸಾವಿರ ಒಟ್ಟಾರೆ ಜಿಲ್ಲೆಯಲ್ಲಿ 1.45ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ.
ಪ್ರಾದೇಶಿಕ ಅರಣ್ಯ ಇಲಾಖೆ ಮಡಿಕೇರಿ ಹಾಗೂ ವೀರಾಜಪೇಟೆ ವಿಭಾಗಗಳಿಂದ ಮಹಾಗನಿ, ನೆಲ್ಲಿ, ಹಲಸು, ಹೆಬ್ಬಲಸು, ಮಾವು, ಕೂಳಿ, ನಂದಿ, ಬಿದಿರು, ಹೊಂಗೆ, ಬೈನೆ, ನೇರಳೆ, ಬಾದಾಮಿ, ಮಾವು ಇತ್ಯಾದಿ 58,700ಗಿಡಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮಾಹಿತಿ ನೀಡಿದರು.







