ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್ ಟಾಮ್ ಆಲ್ಟರ್ ರಾಜೀನಾಮೆ
ಪುಣೆ, ಜೂ.2: ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ನಟನೆ ವಿಭಾಗದ ಮುಖ್ಯಸ್ಥ ಹುದ್ದೆಗೆ ಹಿರಿಯ ನಟ ಟಾಮ್‌ಆಲ್ಟರ್ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಏರ್ಪಟ್ಟ ಭಿನ್ನಾಭಿಪ್ರಾಯವೇ ಅವರ ಈ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ. ಆದರೆ ಸಂಸ್ಥೆಯ ಆಡಳಿತ ಮಂಡಳಿ ಹೇಳುವಂತೆ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಸಮಯ ಮೀಸಲಿರಿಸಲು ಸಾಧ್ಯವಾಗದೇ ಟಾಮ್ ರಾಜೀನಾಮೆ ನೀಡಿದ್ದಾರೆ.
ಟಾವ್ ಅವರ ರಾಜೀನಾಮೆ ಪತ್ರ ದೊರೆತಿರುವುದನ್ನು ಎಫ್‌ಟಿಐಐ ನಿರ್ದೇಶಕ ಭೂಪೇಂದ್ರ ಕೈಂತೋಲ ದೃಢಪಡಿಸಿದ್ದಾರಾದರೂ ಅದನ್ನು ಇನ್ನಷ್ಟೇ ಅಂಗೀಕರಿಸಬೇಕಿದೆ ಎಂದು ಹೇಳಿದ್ದಾರಲ್ಲದೆ ಬೇರೇನನ್ನೂ ಹೇಳಲು ನಿರಾಕರಿಸಿದ್ದಾರೆ.
‘‘ಟಾಮ್ ಅವರ ಪ್ರತಿಭೆ ಹಾಗೂ ಸಿನೆಮಾ ಕ್ಷೇತ್ರಕ್ಕೆ ಅವರ ಕೊಡುಗೆಯ ಬಗ್ಗೆ ನಮಗೆ ಗೌರವವಿದೆಯಾದರೂ ಒಬ್ಬ ಆಡಳಿತಗಾರನಾಗಿ ಅವರು ವಿಫಲರಾದ ಕಾರಣ ವಿದ್ಯಾರ್ಥಿಗಳು ಸಮಸ್ಯೆಯೆದುರಿಸಬೇಕಾಗಿ ಬಂದಿದೆ,’’ಎಂದು ಹಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಕೆಲವರ ಪ್ರಕಾರ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು.
ಮೇ 23ರಂದು ಅವರಿಗೂ ವಿದ್ಯಾರ್ಥಿಗಳಿಗೂ ನಡುವೆ ನಡೆದ ವ್ಯಾಗ್ಯುದ್ಧದ ನಂತರ ಟಾಮ್ ರಾಜೀನಾಮೆ ನೀಡುವುದಾಗಿ ಬೆದರಿಸಿದ್ದರು. ಅವರು ನವೆಂಬರ್ 2014ರಲ್ಲಿ ನಟನಾ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿದ್ದರು.





