ಅಮಿತ್ ಶಾ ಗೆ ಗುಜರಾತ್ ಮುಖ್ಯಮಂತ್ರಿ ಪಟ್ಟ?
ಅಹ್ಮದಾಬಾದ್, ಜೂ.2: ಗುಜರಾತ್‌ನಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಬಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ರಾಜ್ಯದ ಮುಖ್ಯಮಂತ್ರಿಯನ್ನು ಬದಲಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಹಾಲಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಜನರೊಂದಿಗೆ ಉತ್ತಮ ಬಾಂಧವ್ಯ ಮುಂದುವರಿಸಿಕೊಂಡು ಹೋಗಲು ವಿಫಲರಾಗಿದ್ದಾರೆಂಬ ಪಕ್ಷದ ಆಂತರಿಕ ಸಮೀಕ್ಷೆಯೊಂದರ ವರದಿಯ ನಂತರ ಪಕ್ಷಕ್ಕೆ ಚುನಾವಣೆಯಲ್ಲಿ ಗೆಲುವು ತರುವಂತಹ ನಾಯಕನನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗಿಂತ ಉತ್ತಮ ವ್ಯಕ್ತಿ ಈ ಹುದ್ದೆಗೆ ಬೇರೊಬ್ಬರಿಲ್ಲವೆಂಬ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ ಮೂಲಗಳು ತಿಳಿಸಿವೆಯೆಂದು ಜನಸತ್ತಾ ವರದಿಯೊಂದು ಹೇಳಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯ್ ರೂಪಾನಿ, ನಿತಿನ್ ಪಟೇಲ್, ಸೌರಬ್ ಪಟೇಲ್ ಅವರಂತಹ ಪ್ರಮುಖ ನಾಯಕರು ರಾಜ್ಯದಲ್ಲಿದ್ದರೂ ಯಾರೊಬ್ಬರೂ ಅಮಿತ್ ಶಾ ಅವರಂತೆ ತಮ್ಮ ಪ್ರಬಾವವನ್ನು ರಾಜ್ಯದ ಜನರ ಮೇಲೆ ಬೀರಲು ಸಾಧ್ಯವಿಲ್ಲವೆಂಬುದು ಪಕ್ಷದ ಅಭಿಮತವಾಗಿದೆ. ಮೇಲಾಗಿ ಶಾ ಅಲ್ಲದಿದ್ದರೆ ರೂಪಾನಿ ಅವರನ್ನು ಆರಿಸಬಹುದು ಎಂದು ಹೇಳಲಾಗುತ್ತಿದ್ದರೂ ರೂಪಾನಿ ಬಗ್ಗೆ ಅವರ ಕ್ಷೇತ್ರವಾದ ರಾಜಕೋಟ್‌ನ ಜನತೆ ಹೊರತಾಗಿ ಬೇರೆಯವರಿಗೆ ಹೆಚ್ಚು ಪರಿಚಯವಿಲ್ಲವಾಗಿದೆ.
ಗುಜರಾತ್ ಮುಖ್ಯಮಂತ್ರಿ ವಿಚಾರವಾಗಿ ಯಾವ ಪ್ರಶ್ನೆಗೂ ಅಮಿತ್ ಶಾ ಉತ್ತರ ನೀಡಲು ನಿರಾಕರಿಸಿದ್ದಾರಾದರೂ, ಅವರನ್ನು ಗುಜರಾತ್ ಮುಖ್ಯಮಂತ್ರಿ ಹುದ್ದೆಗೆ ಏರಿಸಿದ ಪಕ್ಷದಲ್ಲಿ ಪ್ರಧಾನಿ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಬೇರೊಬ್ಬ ನಾಯಕನನ್ನು ಆರಿಸಬೇಕಾಗುತ್ತದೆ. ಮೇಲಾಗಿ ಮೂಲಗಳು ತಿಳಿಸುವಂತೆ ಪ್ರಧಾನಿ ಪ್ರಕಾರ ಶಾ ಅವರ ಆವಶ್ಯಕತೆ ಗುಜರಾತಿಗಿಂತ ಉತ್ತರ ಪ್ರದೇಶಕ್ಕೆ ಹೆಚ್ಚಿದೆ. ಏನಿದ್ದರೂ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಾಗಿದೆ.





