ಯೋಧರ ಪಾರ್ಥಿವ ಶರೀರಗಳು ಹುಟ್ಟೂರಿಗೆ
ಪುಲ್ಗಾಂವ್ ಅಗ್ನಿ ದುರಂತ
ನಾಗಪುರ, ಜೂ.2: ಪುಲ್ಗಾಂವ್‌ನ ಕೇಂದ್ರೀಯ ಮದ್ದು ಗುಂಡು ಉಗ್ರಾಣದಲ್ಲಿ (ಸಿಎಡಿ) ಸಂಭವಿಸಿದ ಭೀಕರ ಬೆಂಕಿ ಅನಾಹುತಕ್ಕೆ ಬಲಿಯಾಗಿದ್ದ ಇಬ್ಬರು ಸೇನಾಧಿಕಾರಿಗಳು ಹಾಗೂ ಜವಾನರ ಪಾರ್ಥಿವ ಶರೀರಗಳನ್ನು ಇಂದು ಮುಂಜಾನೆ ಅವರ ಹುಟ್ಟೂರಿಗಳಿಗೆ ಕಳುಹಿಸಲಾಗಿದೆ.
ಯೋಧರ ಪಾರ್ಥಿವ ಶರೀರಗಳನ್ನು ಪುಲ್ಗಾಂವ್‌ನಿಂದ ಇಲ್ಲಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಮೂವರ ಪಾರ್ಥಿವ ಶರೀರಗಳನ್ನು ದಿಲ್ಲಿಗೆ ಕಳುಹಿಸಲಾಗಿದ್ದರೆ, ಮತ್ತೊಬ್ಬನನ್ನು ಮುಂಬೈಗೆ ಕಳುಹಿಸಲಾಯಿತೆಂದು ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ, ವಿಂಗ್ ಕಮಾಂಡರ್ ಸಮೀರ್ ಗಂಗಾಖೇಡ್ಕರ್ ತಿಳಿಸಿದ್ದಾರೆ.
ಲೆ.ಕ.ಆರ್.ಎಸ್.ಪವಾರ್‌ರ ಮೃತದೇಹವನ್ನು ದಿಲ್ಲಿಯ ಮೂಲಕ ಹರಿದ್ವಾರಕ್ಕೆ ಕಳುಹಿಸಲಾಗುವುದು ಹಾಗೂ ನಾಯ್ಕೆ ರಣ್ ಸಿಂಗ್‌ರ ಮೃತ ಶರೀರವನ್ನು ಹರ್ಯಾಣದ ರೇವಾರಿಗೆ ತಲುಪಿಸಲಾಗುವುದು. ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್‌ನ (ಡಿಎಸ್‌ಸಿ) ಸಿಪಾಯಿ ಸತ್ಯ ಪ್ರಕಾಶ್‌ರ ಪಾರ್ಥಿವ ಶರೀರವನ್ನು ಕಾನ್ಪುರಕ್ಕೆ ಒಯ್ಯಲಾಗುವುದು ಹಾಗೂ ಮೇಜರ್ ಮನೋಜ್‌ರ ಕಳೇಬರವನ್ನು ಮುಂಬೈಯ ಮೂಲಕ ತಿರುವಂನತಪುರಕ್ಕೊಯ್ದು ಆಲಪ್ಪುರಕ್ಕೆ ಕಳುಹಸಲಾಗುವುದೆಂದು ಅವರು ಹೇಳಿದ್ದಾರೆ.
ಪುಲ್ಗಾಂವ್‌ನ ಆಯುಧಾಗಾರದಲ್ಲಿ ನಡೆದ ಬೆಂಕಿ ಅವಘಡದಲ್ಲಿ 19 ಯೋಧರು ಸಾವಿಗೀಡಾಗಿದ್ದಾರೆ.







