ಇಂಡೋನೇಷ್ಯಾ ಸೂಪರ್ ಸರಣಿ: ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ

ಜಕಾರ್ತ, ಜೂ.2: ಇಂಡೋನೇಷ್ಯಾ ಸೂಪರ್ ಸರಣಿಯಲ್ಲಿ ಹಿರಿಯ ಶಟ್ಲರ್ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಸೈನಾ ಟೂರ್ನಿಯಲ್ಲಿ ಸ್ಪರ್ಧೆಗೆ ಉಳಿದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ಇಂಡೋನೇಷ್ಯಾ ಓಪನ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಸೈನಾ ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ಫಿಟ್ರಿಯಾನಿ ಫಿಟ್ರಿಯಾನಿ ಅವರನ್ನು 21-11, 21-10 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು.
2009, 2010 ಹಾಗೂ 2012ರಲ್ಲಿ ಇಂಡೋನೇಷ್ಯಾ ಓಪನ್ ಚಾಂಪಿಯನ್ ಆಗಿದ್ದ 8ನೆ ಶ್ರೇಯಾಂಕದ ಸೈನಾ ಅಂತಿಮ 8ರ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತೆ ಸ್ಪೇನ್‌ನ ಕಾರೊಲಿನಾ ಮರಿನ್‌ರನ್ನು ಎದುರಿಸುವ ಸಾಧ್ಯತೆಯಿದೆ. ಇದೇ ವೇಳೆ, ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ, ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಕ್ರಮವಾಗಿ ಮಹಿಳೆಯರ ಡಬಲ್ಸ್ ಹಾಗೂ ಪುರುಷರ ಡಬಲ್ಸ್‌ನಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ-ಅಶ್ವಿನಿ ಜೋಡಿ ಚೀನಾದ ಹ್ಯೂಯಾಂಗ್ ಯಾಕ್ವಿಯೊಂಗ್ ಹಾಗೂ ತಾಂಗ್ ಜಿನ್‌ಹ್ಯೂವಾ ವಿರುದ್ಧ 9-21, 18-21 ಗೇಮ್‌ಗಳ ಅಂತರದಿಂದಲೂ, ಪುರುಷರ ಡಬಲ್ಸ್‌ನಲ್ಲಿ ಮನು ಹಾಗೂ ಸುಮೀತ್ ಕೊರಿಯಾದ ಕೊ ಸಂಗ್ ಹ್ಯೂನ್ ಹಾಗೂ ಶಿನ್ ಬಯೆಕ್ ಚೆಯೊಲ್ ವಿರುದ್ಧ 18-21, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ





