ಭಾರತೀಯ ಮೂಲದ ವೈದ್ಯನ ವಿಚಾರಣೆ
ಮಹಿಳಾ ರೋಗಿಗಳಿಗೆ ಲೈಂಗಿಕ ಪೀಡನೆ

ಲಂಡನ್, ಜೂ. 2: ತನ್ನ ಆರು ಮಹಿಳಾ ರೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಟನ್‌ನ 53 ವರ್ಷದ ಭಾರತೀಯ ಮೂಲದ ಪ್ರಸೂತಿ ತಜ್ಞರೊಬ್ಬರು ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾದರು.
ಡಾ. ಮಹೇಶ್ ಪಟವರ್ಧನ್ ಮಹಿಳೆಯರ ದೇಹಕ್ಕೆ ತನ್ನ ದೇಹದಿಂದ ಉಜ್ಜಿದ್ದಾರೆ ಹಾಗೂ ಅವರನ್ನು ಹಿಂದಿನಿಂದ ತಬ್ಬಿಹಿಡಿದುಕೊಂಡಿದ್ದಾರೆ ಎಂಬುದಾಗಿ ವುಲ್‌ವಿಚ್ ಕ್ರೌನ್ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಹಚ್ಚೆ ಹಾಕಿದ ಹಿಂಭಾಗವನ್ನು ನೋಡಲು ಸಾಧ್ಯವಾಗುವಂತೆ ಬಟ್ಟೆ ತೆಗೆಯಲು ಓರ್ವ ಮಹಿಳೆಗೆ ಆತ ಹೇಳಿದ್ದರು ಎಂದು ಆರೋಪಿಸಲಾಗಿದೆ. ಇನ್ನೊಬ್ಬ ಮಹಿಳೆಯ ಲೈಂಗಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಅಶ್ಲೀಲ ವ್ಯಾಖ್ಯಾನ ನೀಡಿದ್ದಾರೆ ಎನ್ನಲಾಗಿದೆ ಎಂದು ‘ಈವ್‌ನಿಂಗ್ ಸ್ಟಾಂಡರ್ಡ್’ ವರದಿ ಮಾಡಿದೆ.
ದಕ್ಷಿಣ ಲಂಡನ್‌ನ ಕ್ವೀನ್ ಎಲಿಝಬೆತ್ ಆಸ್ಪತ್ರೆಯಲ್ಲಿರುವ ಪಟವರ್ಧನ್‌ರ ನ್ಯಾಶನಲ್ ಹೆಲ್ತ್ ಸರ್ವಿಸ್ ಕ್ಲಿನಿಕ್ ಹಾಗೂ ಎಸೆಕ್ಸ್‌ನ ಬಕ್‌ಹರ್ಸ್ಟ್ ಹಿಲ್‌ನಲ್ಲಿರುವ ಬ್ಲಾಕ್‌ಹೀತ್ ಆಸ್ಪತ್ರೆ ಮತ್ತು ಹೋಲಿ ಆಸ್ಪತ್ರೆಗಳಲ್ಲಿರುವ ಅವರ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದ ಮಹಿಳೆಯರು ವೈದ್ಯರ ಚಿಕಿತ್ಸಾ ವಿಧಾನಗಳ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಈ ವೈದ್ಯರ ಬಗ್ಗೆ ಬ್ರಿಟನ್‌ನ ಜನರಲ್ ಮೆಡಿಸಿನ್ ಕೌನ್ಸಿಲ್ (ಜಿಎಂಸಿ)ಗೂ ದೂರು ನೀಡಲಾಗಿದೆ.
2008 ಜುಲೈ ಮತ್ತು 2012 ಸೆಪ್ಟಂಬರ್ ನಡುವೆ ನಡೆಯಿತೆನ್ನಲಾದ ಈ ಲೈಂಗಿಕ ಹಲ್ಲೆ ಆರೋಪಗಳನ್ನು ಡಾ. ಮಹೇಶ್ ಪಟವರ್ಧನ್ ನಿರಾಕರಿಸಿದ್ದಾರೆ.







