ಫಿಲಿಪ್ಪೀನ್ಸ್ ಅಧ್ಯಕ್ಷರಿಗೆ ಮಾಧ್ಯಮ ಗುಂಪುಗಳ ಖಂಡನೆ
ಪತ್ರಕರ್ತರ ಹತ್ಯೆಯನ್ನು ಸಮರ್ಥಿಸುತ್ತಿರುವ ನಾಯಕ

ಮನಿಲ (ಫಿಲಿಪ್ಪೀನ್ಸ್), ಜೂ. 2: ಫಿಲಿಪ್ಪೀನ್ಸ್‌ನ ನಿಯೋಜಿತ ಅಧ್ಯಕ್ಷ ರಾಡ್ರಿಗೊ ಡುಟರ್ಟೆ ಪತ್ರಕರ್ತರ ಬಗ್ಗೆ ನೀಡಿರುವ ಹೇಳಿಕೆಯನ್ನು ಅಂತಾರಾಷ್ಟ್ರೀಯ ಮಾಧ್ಯಮ ಗುಂಪುಗಳು ಖಂಡಿಸಿವೆ. ದೇಶದಲ್ಲಿ ಹಲವಾರು ಪತ್ರಕರ್ತರು ಹತ್ಯೆಗೀಡಾಗಿದ್ದಾರೆ, ಯಾಕೆಂದರೆ ಅವರು ಭ್ರಷ್ಟರಾಗಿದ್ದರು ಹಾಗೂ ತಪ್ಪು ಮಾಡಿದವರಿಗೆ ಹತ್ಯೆಯಿಂದ ವಿನಾಯಿತಿ ಇಲ್ಲ ಎಂಬುದಾಗಿ ಡುಟರ್ಟೆ ನೀಡಿರುವ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಎಬ್ಬಿಸಿರುವುದನ್ನು ಸ್ಮರಿಸಬಹುದಾಗಿದೆ.
ನಿಯೋಜಿತ ಅಧ್ಯಕ್ಷರು ಔಪಚಾರಿಕ, ಸಾರ್ವಜನಿಕ ಕ್ಷಮಾಪಣೆಯನ್ನು ಹೊರಡಿಸುವವರೆಗೆ ಅವರ ಪತ್ರಿಕಾ ಗೋಷ್ಠಿಗಳನ್ನು ಬಹಿಷ್ಕರಿಸುವಂತೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಫಿಲಿಪ್ಪೀನ್ಸ್ ಮಾಧ್ಯಮಗಳಿಗೆ ಕರೆ ನೀಡಿದೆ.
ಫಿಲಿಪ್ಪೀನ್ಸನ್ನು ಪತ್ರಕರ್ತರ ಹತ್ಯಾ ನೆಲವನ್ನಾಗಿ ಮಾಡುವ ಬೆದರಿಕೆಯೊಡ್ಡುತ್ತಿವೆ ಹಾಗೂ ಇಂಥ ಹತ್ಯೆಗಳನ್ನು ಮನ್ನಿಸುವ ಮನೋಭಾವ ಆ ಹೇಳಿಕೆಯಲ್ಲಿದೆ ಎಂದು ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಹೇಳಿದೆ.
ಮಂಗಳವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಡುಟರ್ಟೆ, ‘‘ನೀವು ಬದ್ಮಾಶ್ ಆಗಿದ್ದರೆ, ಪತ್ರಕರ್ತರಾದ ಮಾತ್ರಕ್ಕೆ ನಿಮಗೆ ಹತ್ಯೆಯಿಂದ ವಿನಾಯಿತಿ ಇಲ್ಲ’’ ಎಂದು ಹೇಳಿದ್ದರು.





