ಅವಿಭಜಿತ ಭಾರತದ ಭೂಪಟ ತೋರಿಸಿದ ಮೊರೊಕ್ಕೊ ವಿವಿ

ರಬತ್, ಜೂ. 2: ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿಯನ್ನು ಉಪನ್ಯಾಸ ನೀಡಲು ಆಹ್ವಾನಿಸಿರುವ ಮೊರೊಕ್ಕೊದ ವಿಶ್ವವಿದ್ಯಾನಿಲಯವೊಂದು ಅವಿಭಜಿತ ಭಾರತದ ಭೂಪಟವೊಂದನ್ನು ಪ್ರದರ್ಶಿಸಿ ವಿವಾದವೊಂದನ್ನು ಸೃಷ್ಟಿಸಿದೆ. ಈ ಭೂಪಟದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಭಾರತದ ಭೂಭಾಗವಾಗಿ ತೋರಿಸಲಾಗಿದೆ.
ಇಲ್ಲಿನ ಮುಹಮ್ಮದ್ ವಿಶ್ವವಿದ್ಯಾನಿಲಯದಲ್ಲಿ ಅನ್ಸಾರಿ ಬುಧವಾರ ಉಪನ್ಯಾಸ ನೀಡಬೇಕಾಗಿತ್ತು. ಅವರ ಆಗಮನಕ್ಕೆ ಪೂರ್ವಭಾವಿಯಾಗಿ ಭಾರತದ ಭೂಪಟವನ್ನು ವೇದಿಕೆಯಲ್ಲಿ ಇರಿಸಲಾಗಿತ್ತು. ಅನ್ಸಾರಿ ಸ್ಥಳಕ್ಕೆ ಆಗಮಿಸುವ ಮೊದಲೇ ಅಲ್ಲಿಗೆ ಆಗಮಿಸಿದ್ದ ಭಾರತೀಯ ನಿಯೋಗವೊಂದರ ಸದಸ್ಯರೊಬ್ಬರು ಈ ಪ್ರಮಾದವನ್ನು ಗುರುತಿಸಿದರು.
ಬಳಿಕ, ಕೂಡಲೇ ಭೂಪಟವನ್ನು ತೆರವುಗೊಳಿಸಲಾಯಿತು.
ನಂತರ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ ಉಪರಾಷ್ಟ್ರಪತಿ ‘ಅಕೊಮೊಡೇಟಿಂಗ್ ಡೈವರ್ಸಿಟಿ ಇನ್ ಅ ಗ್ಲೋಬಲೈಸಿಂಗ್ ವರ್ಲ್ಡ್: ದಿ ಇಂಡಿಯನ್ ಎಕ್ಸ್‌ಪೀರಿಯನ್ಸ್’ (ಜಾಗತೀಕರಣಗೊಳ್ಳುತ್ತಿರುವ ಜಗತ್ತಿನಲ್ಲಿ ವೈವಿಧ್ಯತೆಗೆ ಸ್ಥಾನ ಕಲ್ಪಿಸುವತ್ತ: ಭಾರತೀಯ ಅನುಭವ) ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಟಿವಿ ಪರದೆಯನ್ನು ನಿಭಾಯಿಸುತ್ತಿದ್ದ ವಿದ್ಯಾರ್ಥಿಗಳು ಮಾಡಿದ ತಪ್ಪು ಈ ಪ್ರಮಾದಕ್ಕೆ ಕಾರಣ ಎನ್ನಲಾಗಿದೆ.





