ಕಳೆದ ಎರಡು ವರ್ಷಗಳಿಂದ ಯಾವುದಾದರೂ ಟೂರ್ನಿ ಜಯಿಸಿದ್ದೀರಾ?

ಸುಶೀಲ್‌ಕುಮಾರ್‌ಗೆ ಹೈಕೋರ್ಟ್ ಪ್ರಶ್ನೆ
ಹೊಸದಿಲ್ಲಿ, ಜೂ.2: ಕಳೆದ ಆಗಸ್ಟ್ 2014ರ ಬಳಿಕ ನೀವು ಯಾವುದಾದರೂ ಕುಸ್ತಿ ಟೂರ್ನಿಯಲ್ಲಿ ಜಯ ಸಾಧಿಸಿದ್ದೀರಾ? ಎಂದು ಡಬಲ್ ಒಲಿಂಪಿಯನ್ ಸುಶೀಲ್ ಕುಮಾರ್‌ಗೆ ಹೈಕೋರ್ಟ್ ಪ್ರಶ್ನಿಸಿದೆ.
ತನ್ನನ್ನು ಮುಂಬರುವ ರಿಯೋ ಗೇಮ್ಸ್ ತಂಡದಿಂದ ಹೊರಗಿಟ್ಟಿದ್ದನ್ನು ಪ್ರಶ್ನಿಸಿ ಸುಶೀಲ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಶೀಲ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನೀವು 2014ರ ಬಳಿಕ ಫಾರ್ಮ್‌ನಲ್ಲಿದ್ದೀರಾ? ಎನ್ನುವುದು ಮುಖ್ಯ ಪ್ರಶ್ನೆ. ನೀವು ಕಳೆದ ಎರಡು ವರ್ಷದಿಂದ ಸಕ್ರಿಯರಾಗಿಲ್ಲ. ನೀವು ಇತ್ತೀಚೆಗೆ ಯಾವುದಾದರೂ ಟೂರ್ನಿಯನ್ನು ಜಯಿದ್ದೀರಾ? ಎಂದು ಜಸ್ಟಿಸ್ ಮನಮೋಹನ್, ಸುಶೀಲ್ ಪರ ವಕೀಲ ಅಮಿತ್ ಸಿಬಾಲ್‌ರನ್ನು ಪ್ರಶ್ನಿಸಿದರು.
ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದ ಸಿಬಾಲ್, ಸುಶೀಲ್ ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದುಕೊಂಡಿದ್ದಾರೆ. ಬೆದರಿಕೆ ಹಾಗೂ ಗಾಯಗೊಳ್ಳುವ ಭಯದಿಂದ ಇತರ ಎಲ್ಲ ಟೂರ್ನಿಗಳಲ್ಲಿ ಭಾಗವಹಿಸಿಲ್ಲ. 2015ರಲ್ಲಿ ಸುಶೀಲ್‌ಗೆ ಗಾಯಗೊಂಡಿದ್ದರು. ಈ ಕಾರಣದಿಂದ ಅವರು ಕೆಲವು ಟೂರ್ನಿಗಳಿಂದ ಹೊರಗುಳಿಯಬೇಕಾಯಿತು ಎಂದು ತಿಳಿಸಿದರು.
ಯುವ ಕುಸ್ತಿಪಟು ನರಸಿಂಗ್ ಯಾದವ್‌ರನ್ನು ರಿಯೋ 2016ರಲ್ಲಿ ಭಾರತವನ್ನು ಪ್ರತಿನಿಧಿಸುವುದಕ್ಕೆ ಅಡ್ಡಿಯಾಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಡಬ್ಲುಎಫ್‌ಐ ನಿಯಮವನ್ನು ದೂರುತ್ತಿರುವ ಸುಶೀಲ್ ಕುಮಾರ್ ಈ ಹಿಂದೆ ಅದೇ ನಿಯಮದ ಮುಖಾಂತರ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು ಎಂದು ಬೆಟ್ಟು ಮಾಡಿದೆ.
ಡಬ್ಲುಎಫ್‌ಐ ನಿಯಮ ದೀರ್ಘಕಾಲದಿಂದ ಅಸ್ತಿತ್ವದಲ್ಲಿದೆ.ಇದೀಗ ನೀವು(ಸುಶೀಲ್) ನಿಯಮ ಸರಿಯಿಲ್ಲ ಎಂದು ಹೇಳುತ್ತಿದ್ದೀರಿ. 2004, 2008 ಹಾಗೂ 2012ರಲ್ಲಿ ಈ ನಿಯಮದ ಮೂಲಕವೇ ಮೂರು ಬಾರಿ ಒಲಿಂಪಿಕ್ಸ್‌ಗೆ ತೆರಳಿದ್ದೀರಿ. ಅದರ(ಡಬ್ಲುಐಎಫ್) ನಿಯಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಡಬ್ಲುಎಫ್‌ಐ ಕಳೆದ ಮೇ ತನಕ ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳುತ್ತಿತ್ತು. ಸುಶೀಲ್‌ಗೆ ತರಬೇತಿಯನ್ನು ನೀಡಿತ್ತು. ಇದೀಗ ದಿಢೀರನೆ ಸುಶೀಲ್ ತನ್ನ ಅಭ್ಯರ್ಥಿಯಲ್ಲ ಎಂದು ಹೇಳುತ್ತಿದೆ ಎಂದು ಸುಶೀಲ್ ಪರ ವಕೀಲರು ತಿಳಿಸಿದ್ದಾರೆ.
ಸುಶೀಲ್ 66 ಕೆಜಿ ವಿಭಾಗದಲ್ಲಿ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆದರೆ, 2014ರಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ(ಫಿಲಾ) 66 ಕೆಜಿ ವಿಭಾಗವನ್ನು ರದ್ದುಪಡಿಸಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 66 ಕೆಜಿ ಬದಲಿಗೆ 74 ಕೆಜಿ ತೂಕದ ವಿಭಾಗವಿದ್ದು, ಈ ವಿಭಾಗದಲ್ಲಿ ನರಸಿಂಗ್ ಯಾದವ್(26ವರ್ಷ) ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ.
ಸುಶೀಲ್ ಗಾಯದ ಸಮಸ್ಯೆಯಿಂದಾಗಿ ಒಲಿಂಪಿಕ್ಸ್‌ನ ಅರ್ಹತಾ ಟೂರ್ನಿಯಲ್ಲಿ ಆಡಿರಲಿಲ್ಲ. ಯಾದವ್ ಬದಲಿಗೆ ತನ್ನನ್ನು ಒಲಿಂಪಿಕ್ಸ್‌ಗೆ ಕಳುಹಿಸಬೇಕೆಂದು ಹಠ ಹಿಡಿದಿರುವ ಸುಶೀಲ್ ಟ್ರಯಲ್ಸ್‌ನ ಮೂಲಕ ಒಲಿಂಪಿಕ್ಸ್ ಸ್ಪರ್ಧಿಗಳನ್ನು ನಿರ್ಧರಿಸಬೇಕೆಂದು ಆಗ್ರಹಿಸುತ್ತಿದ್ದಾರೆ.







