ಫ್ರೆಂಚ್ ಓಪನ್: ಜೊಕೊವಿಕ್, ಸಾನಿಯಾ- ಪೇಸ್ ಜೋಡಿ ಸೆಮಿಗೆ

ಪ್ಯಾರಿಸ್, ಮೇ 2: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್, ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಝಾ ಹಾಗೂ ಲಿಯಾಂಡರ್ ಪೇಸ್ ಜೋಡಿ ಕ್ರಮವಾಗಿ ಐವಾನ್ ಡೊಡಿಗ್ ಹಾಗೂ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್ ಝೆಕ್‌ನ 7ನೆ ಶ್ರೇಯಾಂಕದ ಥಾಮಸ್ ಬೆರ್ಡಿಕ್‌ರನ್ನು 6-3, 7-5, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಜೊಕೊವಿಕ್ ಅವರು ಬೆರ್ಡಿಕ್ ವಿರುದ್ಧ ಈ ತನಕ ಆಡಿರುವ ಎಲ್ಲ 10 ಪಂದ್ಯಗಳನ್ನು ಜಯಿಸಿದ್ದಾರೆ.
ಈ ಟೂರ್ನಿಯಲ್ಲಿ ಎಂಟನೆ ಬಾರಿ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿರುವ ಜೊಕೊವಿಕ್ ಮೊದಲ ಬಾರಿ ಫ್ರೆಂಚ್ ಓಪನ್ ಕಿರೀಟ ಧರಿಸುವ ವಿಶ್ವಾಸದಲ್ಲಿದ್ದಾರೆ. ಕಳೆದ ವಾರ 9 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಗಾಯದಿಂದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ಜೊಕೊವಿಕ್‌ಗೆ ಈ ಬಾರಿ ಪ್ರಶಸ್ತಿ ಗೆಲ್ಲುವ ಹಾದಿ ಸುಗಮವಾಗಿದೆ.
11 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಜೊಕೊವಿಕ್ ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಆಸ್ಟ್ರೀಯದ ಡೊಮಿನಿಕ್ ಥಿಯೆಮ್‌ರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಸತತ ಮೂರನೆ ದಿನ ಟೆನಿಸ್ ಅಂಗಳಕ್ಕೆ ಇಳಿದು ಹೋರಾಟ ನಡೆಸಲಿದ್ದಾರೆ.
‘‘ನಾನು ಇಂದು ಗ್ರಾನ್‌ಸ್ಲಾಮ್‌ನ ಕ್ವಾರ್ಟರ್‌ಫೈನಲ್ ಆಡಿದ್ದೇನೆ. ಇದು ಯಾವಾಗಲೂ ಕಠಿಣ ಪಂದ್ಯ. ಇಂತಹ ವಾತಾವರಣದಲ್ಲಿ ಆಡುವುದು ಅತ್ಯಂತ ಕಷ್ಟಕರ. ನಾನು ಸರಿಯಾದ ಸಮಯದಲ್ಲಿ ಶ್ರೇಷ್ಠ ಟೆನಿಸ್ ಆಡುತ್ತಿರುವೆ’’ ಎಂದು ಜೊಕೊವಿಕ್ ಪ್ರತಿಕ್ರಿಯಿಸಿದರು.
ಸಾನಿಯಾ-ಡೊಡಿಗ್ ಸೆಮಿಗೆ: ಸಾನಿಯಾ ಮಿರ್ಝಾ ಹಾಗೂ ಕ್ರೋವೆಷಿಯದ ಐವಾನ್ ಡೊಡಿಗ್ ಫ್ರೆಂಚ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ. ಸಾನಿಯಾ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್‌ರನ್ನು ಎದುರಿಸುವ ಸಾಧ್ಯತೆಯೂ ಇದೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ 2ನೆ ಶ್ರೇಯಾಂಕದ ಇಂಡೋ-ಕ್ರೋವೆಷಿಯ ಜೋಡಿ ಸಾನಿಯಾ-ಡೊಡಿಗ್ 7ನೆ ಶ್ರೇಯಾಂಕದ ಯಂಗ್-ಜಾನ್ ಚಾನ್ ಹಾಗೂ ಮ್ಯಾಕ್ಸ್ ಮಿರ್ನಿ ಅವರನ್ನು 6-1, 3-6, 10-6 ಸೆಟ್‌ಗಳ ಅಂತರದಿಂದ ಮಣಿಸಿದರು.
ಸಾನಿಯಾ 2014ರಲ್ಲಿ ಯುಎಸ್ ಓಪನ್ ಟೂರ್ನಿಯಲ್ಲಿ ಬ್ರೆಝಿಲ್‌ನ ಪಾರ್ಟ್ನರ್ ಬ್ರುನೊ ಸೊರೆಸ್ ಅವರೊಂದಿಗೆ ಕೊನೆಯ ಬಾರಿ ಮಿಶ್ರ ಡಬಲ್ಸ್ ಕಿರೀಟ ಧರಿಸಿದ್ದರು.
ಸಾನಿಯಾ-ಡೊಡಿಗ್ ಮುಂದಿನ ಸುತ್ತಿನಲ್ಲಿ ಲೋಕಲ್ ಫೇವರಿಟ್ ಕ್ರಿಸ್ಟಿನಾ ಮ್ಲಾಡೆನೊವಿಕ್ ಹಾಗೂ ಪೆರ್ರಿ ಹ್ಯೂಸ್ ಹೆರ್ಬರ್ಟ್‌ರನ್ನು ಎದುರಿಸಲಿದ್ದಾರೆ. ಕ್ರಿಸ್ಟಿನಾ-ಪೆರ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಬಾಬ್‌ಬ್ರಯಾನ್ ಹಾಗೂ ಕೊಕೊ ವ್ಯಾಂಡೆವೆಗ್‌ರನ್ನು 2-6, 6-2, 13-11 ಸೆಟ್‌ಗಳ ಅಂತರದಿಂದ ಮಣಿಸಿದ್ದರು.
ಪೇಸ್-ಹಿಂಗಿಸ್ ಅಂತಿಮ ನಾಲ್ಕರ ಸುತ್ತಿಗೆ ಲಗ್ಗೆ:ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶ್ರೇಯಾಂಕರಹಿತ ಪೇಸ್ ಹಾಗೂ ಹಿಂಗಿಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 5ನೆ ಶ್ರೇಯಾಂಕದ ಎಲೆನಾ ವೆಸ್ನಿನಾ ಹಾಗೂ ಬ್ರುನೊ ಸೊರೆಸ್‌ರನ್ನು 6-4, 6-3 ಸೆಟ್‌ಗಳಿಂದ ಸುಲಭ ಮಣಿಸಿದರು.
ಈ ಗೆಲುವಿನೊಂದಿಗೆ ಪೇಸ್ ಅವರು ಸ್ವಿಸ್ ಜೊತೆಗಾರ್ತಿ ಹಿಂಗಿಸ್‌ರೊಂದಿಗೆ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಎಲ್ಲ ನಾಲ್ಕು ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ದಾಖಲೆ 22ನೆ ಪ್ರಶಸ್ತಿಯತ್ತ ಸೆರೆನಾ: ಸೆರೆನಾ ವಿಲಿಯಮ್ಸ್ 22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿ ವಿಶ್ವ ದಾಖಲೆ ನಿರ್ಮಿಸುವುದರಿಂದ ಇನ್ನು ಎರಡೇ ಹೆಜ್ಜೆಯಿಂದ ಹಿಂದಿದ್ದಾರೆ.
ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೆರೆನಾ ಕಝಕ್‌ಸ್ತಾನದ ಯೂಲಿಯಾ ಪುಟಿನ್‌ಸೆವಾರನ್ನು 5-7, 6-4, 6-1 ಸೆಟ್‌ಗಳ ಅಂತರದಿಂದ ಸೋಲಿಸಿದರು.







