ಜೂ.4: ಚಾರಿಟಿ ಫುಟ್ಬಾಲ್ ಪಂದ್ಯದಲ್ಲಿ ಕೊಹ್ಲಿ, ಧೋನಿ ಭಾಗಿ

ಮುಂಬೈ, ಜೂ.2: ವಿರಾಟ್ ಕೊಹ್ಲಿ ಫೌಂಡೇಶನ್ ಅಭಿಷೇಕ್ ಬಚ್ಚನ್‌ರ ಪ್ಲೇಯಿಂಗ್ ಫಾರ್ ಹ್ಯೂಮಾನಿಟಿ ಸಂಸ್ಥೆಯ ಜೊತೆಗೂಡಿ ಸಹಾಯಾರ್ಥ ಫುಟ್ಬಾಲ್ ಪಂದ್ಯವನ್ನು ಆಯೋಜಿಸಿದೆ. ಈ ಪಂದ್ಯದಲ್ಲಿ ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ, ಕೊಹ್ಲಿ ಹಾಗೂ ರಣಬೀರ್ ಕಪೂರ್‌ರಂತಹ ಬಾಲಿವುಡ್‌ನ ಪ್ರಮುಖ ನಟರು ಭಾಗವಹಿಸಲಿದ್ದಾರೆ.
ಸೆಲೆಬ್ರಿಟಿ ಕ್ಲಾಸಿಕೊ 2016 ಹೆಸರಿನ ಸಹಾಯಾರ್ಥ ಪಂದ್ಯ ಶನಿವಾರ(ಜೂ.4) ಅಂಧೇರಿಯ ಸ್ಪೋರ್ಟ್ಸ್ ಸಂಕೀರ್ಣದ ಮುಂಬೈ ಫುಟ್ಬಾಲ್ ಅರೆನಾದಲ್ಲಿ ನಡೆಯಲಿದೆ. ಫೌಂಡೇಶನ್‌ನ ಚಾರಿಟೇಬಲ್‌ಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಪಂದ್ಯವನ್ನು ಆಯೋಜಿಸಲಾಗಿದೆ.
ವಿರಾಟ್ ಕೊಹ್ಲಿ ಆಲ್ ಹಾರ್ಟ್ ಫುಟ್ಬಾಲ್ ಕ್ಲಬ್ ನೇತೃತ್ವವನ್ನು ವಹಿಸಿಕೊಂಡಿದ್ದರೆ, ಬಚ್ಚನ್ ಆಲ್ ಸ್ಟಾರ್ಸ್ ಫುಟ್ಬಾಲ್ ಕ್ಲಬ್‌ನ ನಾಯಕತ್ವವನ್ನು ವಹಿಸಲಿದ್ದಾರೆ. ಸಹಾಯಾರ್ಥ ಪಂದ್ಯದಲ್ಲಿ ಕೊಹ್ಲಿ ಹಾಗೂ ಧೋನಿ ಅವರಲ್ಲದೆ ದೇಶದ ಅಗ್ರ ಕ್ರಿಕೆಟಿಗರಾದ ಝಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಆರ್.ಅಶ್ವಿನ್ ಹಾಗೂ ಅಜಿಂಕ್ಯ ರಹಾನೆ ಆಡಲಿದ್ದಾರೆ.
ಅಭಿಷೇಕ್ ಬಚ್ಚನ್‌ರಲ್ಲದೆ ರಣಬೀರ್, ಅರ್ಜುನ್ ಕಪೂರ್, ಆದಿತ್ಯ ರಾಯ್ ಕಪೂರ್ ಹಾಗೂ ನಿರ್ದೇಶಕ ಶೂಜಿತ್ ಸಿರ್ಕಾರ್ ಭಾಗವಹಿಸಲಿದ್ದಾರೆ.







