ಮತ ಖರೀದಿಸುವ ಅಗತ್ಯ ನನಗಿಲ್ಲ: ಬಿ.ಎಂ. ಫಾರೂಕ್

ಬೆಂಗಳೂರು, ಜೂ. 2: ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ನಾಲ್ಕು ಶಾಸಕರು ಭಾರೀ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಜೆಡಿಎಸ್ ಅಭ್ಯರ್ಥಿ ಬಿ.ಎಂ. ಫಾರೂಕ್ ಅವರು, ಈ ಕುಟುಕು ಕಾರ್ಯಾಚರಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಟೈಮ್ಸ್ ನೌ ಸುದ್ದಿವಾಹಿನಿಯ ಹೂಜಾ ಎಂಬ ಪತ್ರಕರ್ತೆಯೊಂದಿಗೆ ನೇರ ಸಂದರ್ಶನದಲ್ಲಿ ಕ್ಯಾಮರಾದ ಎದುರೇ ಮಾತನಾಡಿದ್ದೇನೆ. ಮತ್ತು ಈ ಚುನಾವಣೆಯಲ್ಲಿ ಯಾವುದೇ ರೀತಿಯ ಹಣದ ವ್ಯವಹಾರವನ್ನು ನಾನು ಮಾಡಿಲ್ಲ, ಹಾಗೂ ಅದರ ಅಗತ್ಯವೂ ನನಗಿಲ್ಲ ಎಂದು ಹೇಳಿದ್ದಾರೆ.
ನನಗೆ ಹಲವು ರಾಜ್ಯಗಳಲ್ಲಿ ಚೆನ್ನಾಗಿ ನಡೆಯುತ್ತಿರುವ ಉದ್ಯಮವಿದೆ. ಹಣದ ಆಸೆಗಾಗಿ ನಾನು ಈ ಚುನಾವಣೆಗೆ ಇಳಿದಿಲ್ಲ. ಸಂಸತ್‌ನಲ್ಲಿ ರಾಜ್ಯದ ಸಮಸ್ಯೆಗಳು ಹಾಗೂ ಅಗತ್ಯತೆಗಳ ಬಗ್ಗೆ ಧ್ವನಿಯೆತ್ತಲು, ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಗರಿಷ್ಠ ಸಹಕಾರ ಪಡೆಯುವಂತೆ ಶ್ರಮಿಸಲು ನಾನು ಚುನಾವಣಾ ಕಣಕ್ಕಿಳಿದಿದ್ದೇನೆ. ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರಾಜ್ಯದವರೇ ಆದ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಮಹತ್ತರ ಉದ್ದೇಶದಿಂದ ನನಗೆ ಅವಕಾಶ ನೀಡಿದ್ದಾರೆ. ಇಡೀ ದೇಶದಲ್ಲಿ ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಮುಸ್ಲಿಮರಿಗೆ ಅವಕಾಶ ನೀಡಿಲ್ಲ. ಹೀಗಿರುವಾಗ ಜೆಡಿಎಸ್ ನನಗೆ ಅವಕಾಶ ನೀಡಿದೆ. ನನಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಅದಕ್ಕಾಗಿ ಮತ ಖರೀದಿಸುವ ಕೆಲಸ ಮಾಡಿಲ್ಲ. ಮಾಡುವ ಅಗತ್ಯವೂ ನನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಠಿಣ ಪರಿಶ್ರಮ ಹಾಗೂ ಸ್ವಪ್ರಯತ್ನದಿಂದ ಯಶಸ್ವೀ ಉದ್ಯಮಿಯಾಗಿರುವ ನಾನು ಸಾರ್ವಜನಿಕ ಸೇವಾಕ್ಷೇತ್ರಕ್ಕೆ ಬರಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ಧೇನೆ. ರಾಜ್ಯಸಭೆಯಲ್ಲಿ ಎಲ್ಲಾ ಕ್ಷೇತ್ರಗಳ ಪರಿಣತರು ಹಾಗೂ ಅನುಭವಿಗಳ ಪ್ರಾತಿನಿಧ್ಯ ಇರಬೇಕಾಗಿದೆ. ದೇಶದ ಹಾಗೂ ರಾಜ್ಯದ ವಿಷಯಗಳ ಕುರಿತು ಇಂತಹ ಪರಿಣತರಿಂದ ಚರ್ಚೆ ನಡೆಯಬೇಕಾಗಿದೆ. ಈ ಉದ್ದೇಶದಿಂದಲೇ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.







