ಓಟಿಗಾಗಿ ನೋಟು ಪ್ರಕರಣ: ಸಿಎಂ ಎದುರೇ ಮಾಧ್ಯಮದ ವಿರುದ್ಧ ಹರಿಹಾಯ್ದ ಬಿ.ಆರ್.ಪಾಟೀಲ್

ಬೆಂಗಳೂರು, ಜೂ.3: ರಾಜ್ಯ ಸಭೆ ಚುನಾವಣೆಗೆ ಸಂಬಂಧಿಸಿ ಓಟಿಗಾಗಿ ನೋಟು ಹಂಚಿರುವ ವಿಚಾರವೊಂದು ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಿಂದ ಗುರುವಾರ ಬಹಿರಂಗಗೊಂಡಿರುವ ಬಗ್ಗೆ ಶಾಸಕ ಬಿ.ಆರ್.ಪಾಟೀಲ್ ತೀವ್ರ ಗರಂ ಆಗಿದ್ದಾರೆ.
ಓಟಿಗಾಗಿ ನೋಟು ಪ್ರಕರಣದಲ್ಲಿ ತನ್ನ ಹೆಸರು ತಳುಕು ಹಾಕಿಕೊಂಡಿರುವುದರಿಂದ ವಿಚಲಿತರಾಗಿಲುವ ಬಿ.ಆರ್.ಪಾಟೀಲ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಎದುರೇ ಮಾಧ್ಯಮವದರ ವಿರುದ್ಧ ಹರಿಹಾಯ್ದ ಘಟನೆ ವರದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹಕಚೇರಿ ಕೃಷ್ಣಾದಲ್ಲಿಂದು ಭೇಟಿಯಾದ ಬಿ.ಆರ್.ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿ ವಿವರಣೆ ನೀಡಿದ್ದಾರೆ. ಈ ವೇಳೆ ಪಾಟೀಲ್ ಮಾಧ್ಯಮವನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ದರೆನ್ನಲಾಗಿದೆ. ಬಳಿಕ ಅವರನ್ನು ಸಿದ್ದರಾಮಯ್ಯ ಸಮಾಧಾನಪಡಿಸಿ ಕಳುಹಿಸಿದರೆನ್ನಲಾಗಿದೆ.
ಮೌನ ಪ್ರತಿಭಟನೆ ನಡೆಸಿದ ಪಾಟೀಲ್
ಇದಕ್ಕೂ ಮೊದಲು ವೋಟಿಗಾಗಿ ನೋಟು ಪ್ರಕರಣದ ರಹಸ್ಯ ಕಾರ್ಯಚರಣೆಯಲ್ಲಿ ತನ್ನ ಚಾರಿತ್ರ ವಧೆ ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಬಿ.ಆರ್.ಪಾಟೀಲ್‌ರವರು ವಿಧಾನಸೌಧ ಕೆಂಗಲ ಹನುಮಂತಯ್ಯ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಕಪ್ಪುಪಟ್ಟಿ ಧರಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ತನ್ನ ಮೇಲೆ ವೃಥಾರೋಪ ಹೊರಿಸಲಾಗಿದ್ದು, ಚಾರಿತ್ರ್ಯ ವಧೆ ಮಾಡಲಾಗಿದೆ. ನನ್ನ ಮೇಲೆ ಆರೋಪ ಹೊರಿಸಿರುವವರು ಅದನ್ನು ಕೂಡಲೇ ಸಾಬೀತುಪಡಿಸಬೇಕು. ಇಡೀ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ಎಂದು ಅವರು ಒತ್ತಾಯಿಸಿದ್ದಾರೆ.







