ಭಟ್ಕಳ: ಪೊಲೀಸರ ಪ್ರತಿಭಟನೆಗೆ ಕರವೇ ಬೆಂಬಲ

ಮುಂಡಗೋಡ, ಜೂ.3: ವೇತನ ಪರಿಷ್ಕರಣೆ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಪೊಲೀಸ್ ಸಿಬ್ಬಂದಿ ರಾಜ್ಯವ್ಯಾಪಿ ನಡೆಸಲು ಉದ್ಧೇಶಿಸಿರುವ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕ ಸಂಘಟನೆಗಳು ಪೊಲೀಸ್ ಪ್ರತಿಭಟನೆಗೆ ಬಹಿರಂಗವಾಗಿ ಬೆಂಬಲ ಸೂಚಿಸಿವೆ. ಇದೀಗ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಸಮಾಜದಲ್ಲಿ ಶಿಸ್ತನ್ನು ಹಾಗೂ ಕಾನೂನನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೊಲೀಸರು ದಶಕಗಳಿಂದ ಅನ್ಯಾಯಕ್ಕೆ ಗುರಿಯಾಗಿ ನೋವು ಅನುಭವಿಸುತ್ತಿದ್ದು, ಇದೀಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಆದರೂ ಅದಕ್ಕೆ ಸರಿಯಾದ ಮನ್ನಣೆ ಸಿಗುವ ಸಾಧ್ಯತೆ ಕಡಿಮೆ ಇದೆ. ಒತ್ತಡದ ಕೆಲಸ ಹಾಗೂ ಕಡಿಮೆ ಸಂಬಳದ ನಡುವೆಯೂ ಅನೇಕ ರೀತಿಯ ದೌರ್ಜನ್ಯಕ್ಕೆ ಪೊಲೀಸ್ ಸಿಬ್ಬಂದಿ ಒಳಗಾಗುತ್ತಿದ್ದಾರೆ.
ವರ್ಗಾವಣೆ ದಂಧೆಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಈ ಎಲ್ಲ ದೌರ್ಜನ್ಯವನ್ನು ವಿರೋಧಿಸಿ ಪೊಲೀಸರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದು, ಇದನ್ನು ಹತ್ತಿಕ್ಕಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಕರವೇ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ತಾಲೂಕು ಅಧ್ಯಕ್ಷ ಅಮರ ನಿಡಗುಂದಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಹಾಜರಿದ್ದರು.







