ರಮಝಾನ್ ಉಪವಾಸ ತನ್ನ ಪ್ರದರ್ಶನದ ಮೇಲೆ ಪರಿಣಾಮಬೀರದು: ತಾಹಿರ್

ಹೊಸದಿಲ್ಲಿ, ಜೂ.3: ‘‘ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯ ವೇಳೆ ರಮಝಾನ್ ಉಪವಾಸ ತನ್ನ ಪ್ರದರ್ಶನದ ಮೇಲೆ ಯಾವುದೇ ಪರಿಣಾಮಬೀರದು. ವೃತ್ತಿಪರ ಕ್ರೀಡೆ ಹಾಗೂ ನಂಬಿಕೆಯ ಆಚರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ನನ್ನ ಪ್ರಕಾರ ಕಷ್ಟವಾಗದು. ಸರಿಯಾದ ಮಾರ್ಗದಲ್ಲಿ ನಡೆದರೆ, ಇದು ತುಂಬಾ ಸುಲಭ’’ ಎಂದು ದಕ್ಷಿಣ ಆಫ್ರಿಕದ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ ಎಎಫ್‌ಪಿಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಲಾಹೋರ್ ಮೂಲದ ದಕ್ಷಿಣ ಆಫ್ರಿಕದ ಅಗ್ರಶ್ರೇಣಿಯ ಸ್ಪಿನ್ನರ್ ತಾಹಿರ್ ದಕ್ಷಿಣ ಆಫ್ರಿಕದ ಪೌರತ್ವ ಪಡೆದ ಬಳಿಕ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ತಾಹಿರ್ ತಾಯ್ನಿಡು ಪಾಕಿಸ್ತಾನದಲ್ಲಿ ಕ್ರಿಕೆಟಿಗರು ಅಂತಾರಾಷ್ಟ್ರೀಯ ಪಂದ್ಯದ ಸಮಯ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ಶುಕ್ರವಾರ ಭೋಜನ ವಿರಾಮ ವಿಸ್ತರಿಸಲಾಗುತ್ತದೆ. ಆ ದಿನ ಹತ್ತಿರದ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದು.
ಕೆರಿಬಿಯನ್ ನಾಡಿನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ಹಾಗೂ ಆಸ್ಟ್ರೇಲಿಯ ತಂಡಗಳು ಭಾಗವಹಿಸಲಿರುವ ತ್ರಿಕೋನ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕ ತಂಡದಲ್ಲಿ ತಾಹಿರ್ ಸ್ಥಾನ ಪಡೆದಿದ್ದಾರೆ. ಶುಕ್ರವಾರ ಆರಂಭವಾಗುವ ತ್ರಿಕೋನ ಸರಣಿ ಜೂ.26ರ ತನಕ ನಡೆಯಲಿದೆ.
‘‘ನಾನು ರಮಝಾನ್ ತಿಂಗಳಲ್ಲಿ ಪ್ರತಿದಿನವೂ ಪ್ರಾರ್ಥನೆ ಮಾಡುವೆ. 30 ದಿನವೂ ಉಪವಾಸವಿರಲು ಪ್ರಯತ್ನಿಸುವೆ. ಕ್ರಿಕೆಟ್‌ನಿಂದಾಗಿ ಉಪವಾಸವಿರಲು ಸಾಧ್ಯವಾಗದೇ ಇದ್ದರೆ ಬಳಿಕ ಉಪವಾಸ ಮಾಡುವೆ. ನನ್ನ ತಂಡದ ಆಟಗಾರರು, ಕೋಚ್ ಹಾಗೂ ಸಿಬ್ಬಂದಿ ನನಗೆ ತುಂಬಾ ಗೌರವ ನೀಡುತ್ತಾರೆ. ನಮಾಝ್ ಮಾಡಲು ಕೆಲವು ಆಟಗಾರರು ತಮ್ಮ ಕೊಠಡಿಯನ್ನು ನೀಡುತ್ತಾರೆ’’ ಎಂದು 32ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವ ತಾಹಿರ್ ಹೇಳಿದರು.
ತಾಹಿರ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲರ್ ಆಗಿದ್ದು, ಪ್ರಸ್ತುತ ಟ್ವೆಂಟಿ-20 ಅಂತಾರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ 2ನೆ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್ ಹಾಗೂ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.







