ಪ್ರೊಫೆಸರನ್ನು ಹತ್ಯೆಗೈಯುವ ಮೊದಲು ಪತ್ನಿಯನ್ನೂ ಕೊಂದಿದ್ದ ಸರ್ಕಾರ್
ಕಂಪ್ಯೂಟರ್ ಕೋಡ್ ಕದ್ದಿದ್ದಾರೆ ಎಂಬ ಸಂಶಯದಿಂದ ದ್ವೇಷ ಬೆಳೆಸಿಕೊಂಡಿದ್ದನೆ?

ಲಾಸ್ ಏಂಜಲಿಸ್, ಜೂ. 3: ಲಾಸ್ ಏಂಜಲಿಸ್‌ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ತನ್ನ ಮಾಜಿ ಕಾಲೇಜು ಪ್ರೊಫೆಸರನ್ನು ಗುಂಡು ಹಾರಿಸಿ ಕೊಂದ ಭಾರತೀಯ ಅಮೆರಿಕನ್ ಬಂದೂಕುಧಾರಿಯು, ತಾನು ಆತ್ಮಹತ್ಯೆಗೈಯುವ ಮೊದಲು ತನ್ನ ಹೆಂಡತಿಯನ್ನೂ ಹತ್ಯೆ ಮಾಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಈ ಇಬ್ಬರೂ ಬಲಿಪಶುಗಳು ಆತನ ‘‘ಹತ್ಯಾ ಪಟ್ಟಿ’’ಯಲ್ಲಿದ್ದರು ಎಂದಿದ್ದಾರೆ.
ಐಐಟಿ ಕರಗಪುರದ ಪದವೀಧರ 38 ವರ್ಷದ ಮೈನಾಕ್ ಸರ್ಕಾರ್ ತನ್ನ ಹೆಂಡತಿ ಆ್ಯಶ್ಲೇ ಹ್ಯಾಸ್ಟಿಯನ್ನು ಕೊಂದ ಬಳಿಕ, ತನ್ನ ಮಾಜಿ ಪ್ರೊಫೆಸರ್ ವಿಲಿಯಂ ಕ್ಲಗ್‌ರನ್ನು ಕೊಲ್ಲಲು ಕಾರಿನಲ್ಲಿ 3,220 ಕಿಲೋಮೀಟರ್ ದೂರ ಪ್ರಯಾಣಿಸಿ ಲಾಸ್ ಏಂಜಲಿಸ್ ತಲುಪಿದ್ದನು ಎಂದು ಮಿನಸೋಟದ ಸ್ಥಳೀಯ ಮಾಧ್ಯಮಗಳು ಹೇಳಿವೆ.
ಆ್ಯಶ್ಲೇ ಮತ್ತು ಸರ್ಕಾರ್ 2011 ಜೂನ್ 14ರಂದು ಮದುವೆಯಾಗಿದ್ದರು ಎಂದು ಮಿನಸೋಟ ರಾಜ್ಯದ ಹೆನಪಿನ್ ಕೌಂಟಿಯ ಅಧಿಕಾರಿಗಳು ಹೇಳಿದ್ದಾರೆ. ದಂಪತಿಯ ಮಧ್ಯೆ ವಿವಾಹ ಬಾಂಧವ್ಯ ಇಲ್ಲಿವರೆಗೂ ಉಳಿದಿತ್ತೆ ಎಂಬುದು ಗೊತ್ತಾಗಿಲ್ಲ.
ಎರಡು ಮಕ್ಕಳ ತಂದೆಯಾಗಿರುವ 39 ವರ್ಷದ ಕ್ಲಗ್ ಲಾಸ್ ಏಂಜಲಿಸ್‌ನ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ಕಲಿಸುತ್ತಿದ್ದರು. ವಿಶ್ವವಿದ್ಯಾಲಯ ಆವರಣದಲ್ಲಿರುವ ಸಣ್ಣ ಕಚೇರಿಯೊಂದರಲ್ಲಿ ಬುಧವಾರ ಅವರಿಗೆ ಗುಂಡು ಹಾರಿಸಿದ ಸರ್ಕಾರ್ ಬಳಿಕ ಅದೇ ಬಂದೂಕಿನಿಂದ ತನಗೂ ಗುಂಡು ಹಾರಿಸಿಕೊಂಡನು ಎಂದು ಪೊಲೀಸರು ತಿಳಿಸಿದರು.
ಸರ್ಕಾರ್‌ನ ಬೆನ್ನುಚೀಲದಲ್ಲಿ ಪೊಲೀಸರಿಗೆ ಒಂದು ಚೀಟಿ ಸಿಕ್ಕಿತು. ಅದರಲ್ಲಿ ತನ್ನ ಬೆಕ್ಕನ್ನು ನೋಡಿಕೊಳ್ಳಬೇಕು ಎಂಬುದಾಗಿ ಆತ ಬರೆದಿದ್ದನು. ಹಾಗಾಗಿ, ಪೊಲೀಸರು ಮಿನಸೋಟದಲ್ಲಿರುವ ಆತನ ಮನೆಗೆ ಹೋದರು. ಅಲ್ಲಿ ಪೊಲೀಸರಿಗೆ ‘ಹತ್ಯಾಪಟ್ಟಿ’ಯೊಂದು ಸಿಕ್ಕಿತು.
ಹತ್ಯಾಪಟ್ಟಿಯಲ್ಲಿ ಕ್ಲಗ್, ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಇನ್ನೋರ್ವ ಪ್ರೊಫೆಸರ್ ಮತ್ತು ಆ್ಯಶ್ಲೆಯ ಹೆಸರುಗಳಿದ್ದವು ಎಂದು ಲಾಸ್ ಏಂಜಲಿಸ್ ಪೊಲೀಸ್ ಮುಖ್ಯಸ್ಥ ಚಾರ್ಲೀ ಬೆಕ್ ತಿಳಿಸಿದರು.
ಮಿನಸೋಟದ ಸಣ್ಣ ಪಟ್ಟಣ ಬ್ರೂಕ್‌ಲಿನ್ ಪಾರ್ಕ್‌ನಲ್ಲಿನ ತನ್ನ ಮನೆಯಲ್ಲಿ ಆ್ಯಶ್ಲೇ ಹೆಣವಾಗಿ ಪತ್ತೆಯಾದರು.
ತನ್ನ ಕಂಪ್ಯೂಟರ್ ಕೋಡನ್ನು ಕ್ಲಗ್ ಕದ್ದಿದ್ದರು ಎಂಬ ಸಂಶಯವನ್ನು ಸರ್ಕಾರ್ ಹೊಂದಿದ್ದನು ಹಾಗೂ ಅದಕ್ಕಾಗಿ ಅವರ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.





