'ನ್ಯೂಸ್ ಕಡಬ’ ವೆಬ್‌ಸೈಟ್‌ಗೆ ಚಾಲನೆ; ಕಚೇರಿ ಉದ್ಘಾಟನೆ

ಕಡಬ, ಜೂ.3. ಕಡಬ ಪರಿಸರದ ಆಗುಹೋಗುಗಳ ಮಾಹಿತಿಯನ್ನು ಕ್ಷಣ ಕ್ಷಣದಲ್ಲಿ ಜನರಿಗೆ ತಲುಪಿಸುವ ಉದ್ದೇಶವನ್ನಿಟ್ಟುಕೊಂಡು ಪ್ರಾರಂಭಿಸಲಾದ ’ನ್ಯೂಸ್ ಕಡಬ’ ಎಂಬ ವೆಬ್‌ಸೈಟ್ ಅನಾವರಣ ಕಾರ್ಯಕ್ರಮವು ಶುಕ್ರವಾರದಂದು ಕಡಬದ ಮಹಾಗಣಪತಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.
ಕಡಬ ವಿಶೇಷ ತಹಶೀಲ್ದಾರ್ ಬಿ.ಲಿಂಗಯ್ಯ ವೆಬ್‌ಸೈಟನ್ನು ಅನಾವರಣಗೊಳಿಸಿ ಮಾತನಾಡಿದರು. ಇಂದಿನ ಪೀಳಿಗೆಯಲ್ಲಿ ಹೆಚ್ಚಾಗಿ ಇಂಟರ್ನೆಟ್ ಬಳಸುತ್ತಿರುವುದರಿಂದ ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಯಾವುದೇ ವಿಷಯಗಳನ್ನು ಕ್ಷಣಮಾತ್ರದಲ್ಲಿ ತಿಳಿಯಬಹುದಾಗಿದ್ದು, ಕಡಬ ಪರಿಸರದ ಸ್ಪಷ್ಟ ಮಾಹಿತಿಗಳನ್ನು ಜನರಿಗೆ ತಲುಪಿಸುವಲ್ಲಿ ’ನ್ಯೂಸ್ ಕಡಬ’ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅನಿಲ್ ಕುಲಕರ್ಣಿ ರಿಬ್ಬನ್ ಕತ್ತರಿಸುವುದರ ಮೂಲಕ ಕಚೇರಿಯನ್ನು ಉದ್ಘಾಟಿಸಿದರು. ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆ ಎಡಿಟಿಂಗ್ ಸ್ಟುಡಿಯೊವನ್ನು ಉದ್ಘಾಟಿಸಿದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಜೆಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.) ಅಧ್ಯಕ್ಷ ನಾಗರಾಜ್ ಎನ್.ಕೆ. ಮಾತನಾಡಿ ಶುಭಹಾರೈಸಿದರು.
ಜೋಯಲ್ ಜೋಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಪ್ರವರ್ತಕ ತಸ್ಲೀಮ್ ಮರ್ಧಾಳ ವಂದಿಸಿ, ಶಿವಪ್ರಸಾದ್ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.







