ಕೃಷ್ಣಗಿರಿ: ಸರಣಿ ಅವಘಡಕ್ಕೆ 18 ಬಲಿ

ಕೃಷ್ಣಗಿರಿ,ಜೂ.3: ರಾಜ್ಯದ ಗಡಿಗೆ ತಾಗಿಕೊಂಡಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೇಲುಮಲೈ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಶುಕ್ರವಾರ ಒಂದು ಬಸ್, ಲಾರಿ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಆರು ಮಹಿಳೆಯರು ಹಾಗೂ 12 ವರ್ಷದ ಮಗು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ. ಕೃಷ್ಣಗಿರಿಯಿಂದ ಹೊಸೂರು ಕಡೆಗೆ ಕೆ ತೆರಳುತ್ತಿದ್ದ 33 ಮಂದಿ ಪ್ರಯಾಣಿಕರ ಬಸ್ಸಿಗೆ, ಕರ್ನಾಟಕದಿಂದ ನೆಲಗಡಲೆಯ ಮೂಟೆಗಳನ್ನು ಹೊತ್ತುತರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಆನಂತರ ಅದು ಪಕ್ಕದಲ್ಲಿ ಸಾಗುತ್ತಿದ್ದ ಕಾರಿಗೆ ಅಪ್ಪಳಿಸಿತು. ಘಟನೆಯಲ್ಲಿ 18 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಲಾರಿಯು, ರಾಷ್ಟ್ರೀಯ ಹೆದ್ದಾರಿಯ ವಿಭಜಕವನ್ನು ಮುರಿದು, ಪ್ರಯಾಣಿಕ ಬಸ್ ಹಾಗೂ ಕಾರಿಗೆ ಢಿಕ್ಕಿ ಹೊಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಲನ್ನು ಕೃಷ್ಣಗಿರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.





