ಬಾಳಿಗಾ ಕೊಲೆ ಪ್ರಕರಣ : ಸ್ಪೋಟಕ ಮಾಹಿತಿ ನೀಡಿದ ಮಂಜು
# ತನಿಖೆಯ ದಾರಿ ತಪ್ಪಿಸಲು ಪೊಲೀಸ್ ಇಲಾಖೆಗೆ ಲಕ್ಷಗಟ್ಟಳೆ ಲಂಚ ? # ಯಾವುದೇ ಪ್ರಭಾವ, ಆಮಿಷಕ್ಕೆ ಬಗ್ಗದೆ ತನಿಖೆಯನ್ನು ಮುನ್ನಡೆಸುತ್ತಿರುವ ಕಮಿಷನರ್

ಮಂಗಳೂರು, ಜೂ 3 : ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಇತ್ತೀಚಿಗೆ ಬಂಧಿತ ಮಂಜು ನಿರೇಶ್ವಾಲ್ಯ ಪ್ರಕರಣದ ಕುರಿತು ಸ್ಪೋಟಕ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾನೆ ಎಂದು ಒನ್ ಇಂಡಿಯಾ ಡಾಟ್ ಕಾಂ ಸುದ್ದಿ ವೆಬ್ ಸೈಟ್ ನಲ್ಲಿ ಶ್ರೇಯಸ್ ವರದಿ ಮಾಡಿದ್ದಾರೆ.
ಅದರ ಪ್ರಕಾರ ಪ್ರಕರಣದ ಸೂತ್ರಧಾರ , ತಲೆಮರೆಸಿಕೊಂಡಿರುವ ನಮೋ ಬ್ರಿಗೇಡ್ ಸ್ಥಾಪಕ ನರೇಶ್ ಶೆಣೈ ಯನ್ನು ಬಚಾವ್ ಮಾಡಲು ಪೊಲೀಸ್ ಇಲಾಖೆಗೆ 50 ಲಕ್ಷ ರೂಪಾಯಿ ತಲುಪಿಸಲಾಗಿದೆ. ಆದರೆ ಪ್ರಕರಣದ ಬೆನ್ನು ಬಿದ್ದಿರುವ ಮಂಗಳೂರು ಪೊಲೀಸ್ ಕಮಿಷನರ್ ಎಂ . ಚಂದ್ರಶೇಖರ್ ಅವರು ಇದನ್ನೆಲ್ಲಾ ಮೆಟ್ಟಿ ನಿಂತು ಪ್ರಕರಣ ತನಿಖೆಗೆ ಇಂತಹ ಯಾವುದೇ ಅಕ್ರಮಗಳಿಂದ ತಡೆಯಾಗದಂತೆ ಶ್ರಮಿಸುತ್ತಿದ್ದಾರೆ. ಅವರ ಅಧೀನ ಅಧಿಕಾರಿಗಳಲ್ಲಿ ಕೆಲವರು ಪ್ರಕರಣದಲ್ಲಿ ಅವರಿಗೆ ಸಹಕರಿಸದೆ ಇದ್ದರೂ ಅವರೇ ಸ್ವತಹ ಇದನ್ನು ನಿಭಾಯಿಸಲು ದಾರಿ ಕಂಡುಕೊಂಡಿದ್ದಾರೆ ಎಂದೂ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ತಿಲಕ್ ಚಂದ್ರ ಅವರ ತಂಡದ ಮೇಲೆ ಪ್ರಭಾವ ಹಾಕಲು 18 ಲಕ್ಷ ರೂಪಾಯಿಗಳನ್ನು ರಾಜ್ಯದ ಸ್ವಯಂ ಘೋಷಿತ ದೇವ ಮಾನವರೊಬ್ಬರಿಗೆ ಕಳುಹಿಸಲಾಗಿದೆ. ಇದಕ್ಕೆ ಆ ದೇವಮಾನವ ರಾಜಕೀಯ ಪ್ರಭಾವ ಬಳಸಿ ತನಿಖೆಯನ್ನು ನಿಧಾನ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಎಂದೂ ಮಂಜು ಬಾಯಿ ಬಿಟ್ಟಿದ್ದಾನೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ ನರೇಶ್ ಶೆಣೈ ಅವರ ತಂಡ ಸ್ವತಹ ಕಮಿಷನರ್ ಚಂದ್ರಶೇಖರ್ ಅವರನ್ನು ಆಮಿಷ ಒಡ್ಡಿ ತನಿಖೆ ತಡೆಯಲು ಪ್ರಯತ್ನಿಸಿದೆ. ಆದರೆ ಕಮಿಷನರ್ ಮಾತ್ರ ಯಾವುದೇ ಒತ್ತಡ ಹಾಗು ಆಮಿಷಕ್ಕೆ ಬಲಿಯಾಗದೆ ತನಿಖೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ. ತನಿಖೆಯ ಹಾದಿ ತಪ್ಪಿಸಲು ಬಂದಿದ್ದ ೫೦ ಲಕ್ಷ ರೂಪಾಯಿಯನ್ನು ಹಂಚಿಕೊಂಡವರ ಮೇಲೆ ಕಮಿಷನರ್ ಅವರ ಹದ್ದಿನ ಕಣ್ಣಿದ್ದು ಅವರ ಭ್ರಷ್ಟಾಚಾರ ಸಾಬೀತಾದರೆ ಅವರು ಅಮಾನತು ಆಗುವ ಸಾಧ್ಯತೆ ಇದೆ ಎಂದೂ ವರದಿ ಹೇಳಿದೆ.
Courtesy : oneindia.com





