ಮಳೆ ಅನಾಹುತ ತಡೆಯಲು ಸೂಕ್ತ ಮುನ್ನಚ್ಚರಿಕೆ ಅಗತ್ಯ: ಪ್ರದೀಪ್ ಸಿಂಗ್ ಕರೋಲ
ಪ್ರಗತಿ ಪರಿಶೀಲನೆ ಸಭೆ

ಕಾರವಾರ, ಜೂ.3: ಮುಂಗಾರು ಅವಧಿಯಲ್ಲಿ ನೆರೆ ಹಾವಳಿ ಉಂಟಾಗಬಹುದಾದ ಪ್ರದೇಶಗಳನ್ನು ಈಗಲೇ ಗುರುತಿಸಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪ್ರದೀಪ್ ಸಿಂಗ್ ಕರೋಲ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು.
ಮಳೆಯಿಂದಾಗಿ ಪ್ರತಿ ವರ್ಷ ನಾಶ, ನಷ್ಟಗಳು ಸಂಭವಿಸುತ್ತವೆ. ಈ ಬಾರಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಪ್ರವಾಹಕ್ಕೆ ತುತ್ತಾಗಬಹುದಾದ ಪ್ರದೇಶಗಳನ್ನು ಗುರುತಿಸಬೇಕು. ಅನಾಹುತ ಸಂಭವಿಸುವ ಮೊದಲೇ ಜನರನ್ನು ಸ್ಥಳಾಂತರ ಇತ್ಯಾದಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಮಳೆ ಪ್ರಮಾಣದ ಮೇಲೆ ನಿರಂತರ ನಿಗಾ ಇರಿಸಬೇಕು ಎಂದು ಅವರು ಹೇಳಿದರು. ಪ್ರವಾಹಕ್ಕೆ ತುತ್ತಾಗಬಹುದಾದ ಐದು ಹಳ್ಳಿಗಳನ್ನು ಗುರುತಿಸಲಾಗಿದ್ದು, ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಹೇಳಿದರು.
ಅಸಮಾಧಾನ: ಬರಗಾಲ ಸಂದಭರ್ದಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಒದಗಿಸಿರುವ ಅನುದಾನವನ್ನು ಇನ್ನೂ ಸಮರ್ಪಕವಾಗಿ ಬಳಸದಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ತುರ್ತು ನೀರು ಪೂರೈಕೆ ಕಾಮಗಾರಿಗಳನ್ನು ಕೈಗೊಳ್ಳಲು ನೀಡಲಾಗುವ ಅನುದಾನವನ್ನು 45ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು. ಆದರೆ ಇನ್ನೂ ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸೂಚನೆ ನೀಡಿದರು.
ಪಡಿತರ ಚೀಟಿಗಳ ದುರುಪಯೋಗವನ್ನು ತಡೆಗಟ್ಟಲು ಅಭಿಯಾನ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ ಶೇ.84ರಷ್ಟು ಪಡಿತರ ಚೀಟಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ನೋಂದಣಿ ಮಾಡಲಾಗಿದೆ. ನೋಂದಣಿ ಸಂದರ್ಭದಲ್ಲಿ ಒದಗಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಅನರ್ಹ ವ್ಯಕ್ತಿಗಳು ಪಡೆದಿರುವ ಪಡಿತರ ಚೀಟಿಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಫಲಿತಾಂಶ ಸುಧಾರಣೆಗೆ ಕ್ರಮ: ಈ ಬಾರಿ ಜಿಲ್ಲೆಯ ಶೈಕ್ಷಣಿಕ ಸಾಧನೆ ನಿರೀಕ್ಷೆಗೆ ಪೂರಕವಾಗಿ ಬಂದಿಲ್ಲ. ಪಿಯುಸಿಯಲ್ಲಿ ಫಲಿತಾಂಶ ಕಡಿಮೆಯಾಗಿದೆ. ಫಲಿತಾಂಶ ಕಳಪೆಯಾಗಲು ಕಾರಣ ಗುರುತಿಸಿ ಶಾಲಾವಾರು ಫಲಿತಾಂಶ ಸುಧಾರಣೆಗೆ ಕಾರ್ಯಕ್ರಮ ರೂಪಿಸಬೇಕು. ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್‌ಗಳಲ್ಲಿ ಪ್ರವೇಶ ದೊರೆಯದ 15ಸಾವಿರ ವಿದ್ಯಾರ್ಥಿಗಳು ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಬೇಕು ಎಂದರು.
ಜಿಪಂ ಮುಖ್ಯ ಸಿಇಒ ರಾಮಪ್ರಸಾದ್ ಮನೋಹರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







