ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸಾ ಶಿಬಿರ

ಮಡಿಕೇರಿ, ಜೂ.3: ಅಪಘಾತಗಳು, ತುರ್ತು ಕಾಯಿಲೆಗಳು ಮತ್ತು ಇತರ ಅನಾಹುತಗಳು ಸಂಭವಿಸಿದ ಸಂದರ್ಭಗಳಲ್ಲಿ ವ್ಯಕ್ತಿಯ ಜೀವ ಸಂರಕ್ಷಣೆಗಾಗಿ ಪ್ರಥಮ ಚಿಕಿತ್ಸೆ ಮಾಡುವ ವಿಧಾನವನ್ನು ತಿಳಿದುಕೊಳ್ಳುವಲ್ಲಿ ಪ್ರತಿಯೊಬ್ಬರು ಮುಂದಾಗುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಗರದ ಸಂತ ಮೈಕಲರ ಶಾಲೆ ಸಭಾಂಗಣದಲ್ಲಿ ಸರಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಕ್ರಾಫ್ಟ್ ಕಲಾ ಶಿಕ್ಷಕರಿಗೆ ನಡೆದ ಪ್ರಥಮ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆ ಹೆಚ್ಚಿರುತ್ತದೆ. ಆದ್ದರಿಂದ ಅಪಘಾತಗಳು, ಪ್ರಾಕೃತಿಕ ವಿಪತ್ತು ಮುಂತಾದ ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಚಿಕಿತ್ಸೆ ದೊರಕುವುದಕ್ಕಿಂತ ಮುಂಚಿತವಾಗಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಅಗತ್ಯ ಕ್ರಮ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆ ಕೊಡುವ ವಿಧಾನಗಳನ್ನು ಕಲಿತುಕೊಳ್ಳುವಲ್ಲಿ ಪ್ರತಿಯೊಬ್ಬರೂ ಮುಂದಾಗುವಂತೆ ಜಿಪಂ ಸಿಇಒ ಚಾರುಲತಾ ಸೋಮಲ್ ಸಲಹೆ ನೀಡಿದರು. ಜಿಲ್ಲೆಯಲ್ಲಿ ಮೊದಲನೇ ಹಂತವಾಗಿ ರೆಡ್‌ಕ್ರಾಸ್ ಸಂಸ್ಥೆಯು, ಜಿಪಂ ಮತ್ತು ಶಿಕ್ಷಣ ಇಲಾಖೆ ಜೊತೆಗೂಡಿ ಕಾರ್ಯಗಾರ ಹಮ್ಮಿಕೊಂಡಿದೆ. ಇದರಿಂದ ದೈಹಿಕ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳಿಗೆ ಪ್ರಥಮ ಚಿಕಿತ್ಸೆ ಮಾಡುವ ವಿಧಾನಗಳನ್ನು ಕಲಿತುಕೊಳ್ಳುವಲ್ಲಿ ನೆರವಾಗಲಿದೆ ಎಂದು ಚಾರುಲತಾ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವ ಸಂರಕ್ಷಣೆ ಅಥವಾ ಅಪಘಾತದಿಂದ ಪರಿಸ್ಥಿತಿ ಹದಗೆಡದಂತೆ ತಡೆಯುವುದು. ಹಾಗೆಯೇ ಶೀಘ್ರ ಚೇತರಿಕೆಯನ್ನು ಉತ್ತೇಜಿಸುವಲ್ಲಿ ಪ್ರಥಮ ಹಂತದ ಚಿಕಿತ್ಸೆ ಪ್ರಯೋಜನಕಾರಿಯಾಗಲಿದೆ ಎಂದರು.
ಅಪಘಾತಗಳು ಸಂಭವಿಸಿದಾಗ ಅತಿ ಅಪಾಯಕಾರಿ ಗಾಯ ಅಥವಾ ಅನಾರೋಗ್ಯವಿದೆ ಎಂದು ಸಂಶಯ ಹೊಂದಿದಲ್ಲಿ ತು ರ್ತು ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಅಭಿನಂದನ್, ಡಾ.ದೇವಿ ಆನಂದ್, ಡಾ, ಶಿವರಾಜ್, ಡಾ.ಶ್ವೇತಾ, ಡಾ. ಅನ್ನಪೂರ್ಣ ಮತ್ತಿತರರು ಪ್ರಥಮ ಚಿಕಿತ್ಸೆ ನೀಡುವ ಕುರಿತು ಹಲವಾರು ಮಾಹಿತಿ ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಎಚ್.ಆರ್.ಮುರುಳಿಧರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗಿರೀಶ್, ಶಿಕ್ಷಕರಾದ ಮಹದೇವಯ್ಯ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.







