ಹಿಮಾಲಯ ಪ್ರವಾಸಿಗರಿಗೆ ಆತ್ಮೀಯ ಬೀಳ್ಕೊಡುಗೆ

ಚಿಕ್ಕಮಗಳೂರು, ಜೂ.3: ಉತ್ತರ ಭಾರತ ಹಾಗೂ ಹಿಮಾಲಯ ಪರ್ವತದ ದುರ್ಗಮ ಪ್ರದೇಶಗಳಿಗೆ ಭೇಟಿ ನೀಡಿ ಚಿಕ್ಕಮಗಳೂರಿನ ಕಾಫಿ ಕಂಪನ್ನು ಆ ಪ್ರದೇಶಗಳ ಜನರಿಗೆ ಪರಿಚಯಿಸಲು ಶುಕ್ರವಾರ ಕಾರಿನ ಮೂಲಕ ಸಾಹಸ ಪ್ರವಾಸ ಆರಂಭಿಸಿದ ನಾಲ್ಕು ಜನರ ಕುಚಿಕು ತಂಡಕ್ಕೆ ಬಾಲ್ಯದ ಗೆಳೆಯರು, ಆತ್ಮೀಯರು, ಪ್ರೀತಿಪಾತ್ರರು ಬೀಳ್ಕೊಟ್ಟರು.
ಚಿಕ್ಕಮಗಳೂರಿನ ಮೌಂಟೆನ್‌ವ್ಯೆ ಪ್ರೌಢಶಾಲೆಯ 1975ನೆ ಸಾಲಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದ ಟಿ.ಎನ್.ಚನ್ನಬಸವೇಗೌಡ, ಜಿ.ಎಲ್.ವೆಂಕಟೇಶಮೂರ್ತಿ, ಸಿ.ಪಿ.ನಾರಾಯಣ ರಾವ್, ಐ.ಎಸ್.ಜಯದೇವ ರವರು ನಾಲ್ಕು ದಶಕಗಳ ಗೆಳೆತನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡು, ವಿಶ್ವದ ಅತ್ಯಂತ ಕಠಿಣ ರಸ್ತೆ ಮಾರ್ಗ ಎಂದು ಗುರುತಿಸಿಕೊಂಡಿರುವ ಹಿಮಾಲಯ ಪರ್ವತದ ಹಾದಿಗಳ ಮೂಲಕ ಸಮುದ್ರ ಮಟ್ಟದಿಂದ 13ಸಾವಿರ ಅಡಿ ಮೇಲಿರುವ ರೋಹತಂಗ್ ಪಾಸ್ ಹಾಗೂ ವಿಶ್ವದಲ್ಲೇ ಅತಿ ಎತ್ತರದ ಸುಮಾರು 13ಸಾವಿರ ಅಡಿ ಎತ್ತರದ ಅತ್ಯಂತ ದುರ್ಗಮ ಮತ್ತು ಕಠಿಣ ಹಾದಿಯನ್ನು ಹೊಂದಿರುವ ಕರ್‌ದುಂಗಾಲಾ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಟಿ.ಎನ್.ಚನ್ನಬಸವೇಗೌಡ ನಗರದ ತೊಗರಿಹಂಕಲ್‌ನ ಟಿ.ಬಿ.ನಾಗೇಶ್ ಅವರ ಪುತ್ರರಾಗಿದ್ದು, ವೃತ್ತಿಯಲ್ಲಿ ಕಾಫಿ ಬೆಳೆಗಾರರಾಗಿದ್ದಾರೆ. ಶಾಲಾ ಕಾಲೇಜು ದಿನಗಳಿಂದಲ್ಲೇ ಬೈಕ್, ಕಾರ್ ರ್ಯಾಲಿಗಳಲ್ಲಿ ಆಕರ್ಷಿತ ರಾದವರು. ಚಿಕ್ಕಮಗಳೂರು ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಚನ್ನಬಸವೇಗೌಡ ರಾಜ್ಯದಲ್ಲಿ ಕಾರ್ ರ್ಯಾಲಿಯನ್ನು ಇನ್ನಷ್ಟು ಜನಪ್ರಿಯ ಗೊಳಿಸುವಲ್ಲಿ ಸಫಲರಾದವರು.
20ದಿನಗಳ ಪ್ರವಾಸದಲ್ಲಿ ತಂಡ ಸುಮಾರು 8ಸಾವಿರ ಕಿ.ಮೀ ಕ್ರಮಿಸಲಿದ್ದು, ಜಯಪುರ, ಶಿಮ್ಲಾ, ಮನಾಲಿ, ರೋಹತಂಗ್‌ಪಾಸ್, ಲೇಹ್‌ಲಡಕ್, ಕರ್‌ದುಂಗಾಲಾ, ಡ್ರಾಸ್, ಟುಲೋಲಿಂಗ್, ಶ್ರೀನಗರ, ಜಮ್ಮು, ಅಮೃತಸರ್, ಬಿಕೇನರ್, ಜೈಸಲ್‌ಮರ್, ಅಹ್ಮದಾಬಾದ್ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಜಿ.ಎಲ್.ವೆಂಕಟೇಶಮೂರ್ತಿ, ನಗರದ ವೈದ್ಯರಾಗಿದ್ದ ದಿ.ಡಾ.ಜಿ.ಲಕ್ಕೇಗೌಡ ಅವರ ಮಗ, ವೃತ್ತಿಯಲ್ಲಿ ಸಗಟು ಔಷಧ ವ್ಯಾಪಾರದಲ್ಲಿ ತೊಡಗಿಕೊಂಡಿರುವ ವೆಂಕಟೇಶ್ ಒಳ್ಳೆಯ ಹವ್ಯಾಸಿ ಛಾಯಾಚಿತ್ರಕಾರರಾಗಿದ್ದಾರೆ.
ಸಿ.ಪಿ.ನಾರಾಯಣರಾವ್, ಭಾರತೀಯ ಸೇನೆಯಲ್ಲಿ 29ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರು. ಹಲವು ಭಾಷೆಗಳ ನಿಪುಣರಾದ ಇವರು ಪಾಕ್ ಮತ್ತು ಚೀನಾ ಗಡಿ ಭಾಗಗಳಲ್ಲಿ ತಾಗಿದಂತೆ ಸಾಗುವ ಈ ಪ್ರಯಾಣದಲ್ಲಿ ಅವರ ಪ್ರಭಾವ, ಭಾಷೆ ಈ ತಂಡದ ನೆರವಿಗೆ ಬರಲಿದೆ.
ಸಕಲೇಶಪುರದ ಐಗೂರಿನ ಐ.ಎಸ್.ಜಯದೇವ್, ಕಾಫಿ ಬೆಳೆಗಾರರಾಗಿದ್ದು, ಅದ್ಭುತ ಚಾಲನಾ ಕೌಶಲ್ಯ ಹೊಂದಿದ್ದಾರೆ.
ಎಬಿಸಿ ಕಂಪೆನಿಯ ಮುಖ್ಯ ವ್ಯವಸ್ಥಾಪಕ ಜಾವೀದ್, ಈ ಕುಚಿಕುಗಳ ಹಿಮಾಲಯ ಪ್ರವಾಸಕ್ಕೆ ಬಾವುಟ ತೋರಿಸುವ ಮೂಲಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟಿ.ಎನ್.ಮಲ್ಲಣ್ಣ ಗೌಡ, ಎಂ.ಜಿ.ಬಾಬುಶಂಕರ್ ಮತ್ತಿತರರು ಉಪಸ್ಥಿತರಿದ್ದರು.







