ಮಥುರಾ ಉರಿಯುತ್ತಿದ್ದಾಗ ‘ಪಿಟೀಲು ಬಾರಿಸಿದ’ ಹೇಮಾಮಾಲಿನಿ!
20ಕ್ಕೂ ಹೆಚ್ಚು ಮಂದಿ ಬಲಿಯಾಗಿರುವಾಗ ತನ್ನ ಶೂಟಿಂಗ್ ಫೋಟೊಗಳನ್ನು ಟ್ವೀಟ್ ಮಾಡಿದ ಸ್ಥಳೀಯ ಸಂಸದೆ
ಮಥುರಾ, ಜೂ.4: ಗುರುವಾರ ಸಂಜೆ ಭೂ ಒತ್ತುವರಿದಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಎಸ್ಪಿಮತ್ತು ಇನ್ನೊಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ 21 ಮಂದಿ ಬಲಿಯಾದ ಘಟನೆಯ ಬಗ್ಗೆ ಉತ್ತರ ಪ್ರದೇಶ ಸರಕಾರ ತನಿಖೆಗೆ ಆಗ್ರಹಿಸಿದ್ದರೆ, ಸ್ಥಳೀಯ ಸಂಸದೆ ಹೇಮಾ ಮಾಲಿನಿ ಏನೂ ನಡೆದೇ ಇಲ್ಲವೆಂಬಂತೆ ತನ್ನ ಶೂಟಿಂಗ್ ಫೋಟೊಗಳನ್ನು ಟ್ವಿಟರ್‌ನಲ್ಲಿ ಅಪ್ ಲೋಡ್ ಮಾಡಿದ್ದಾರಲ್ಲದೆ ಅವರ ಅಸಂವೇದಿತನಕ್ಕೆ ಹಲವಾರು ಮಂದಿಯ ಆಕ್ರೋಶವನ್ನೂ ಎದುರಿಸಿದ್ದಾರೆ.
ಮಧ್ ದ್ವೀಪದಲ್ಲಿ ಶೂಟಿಂಗ್ ಮಾಡುವುದು ಈಗ ತುಂಬಾ ಸಂತೋಷದಾಯಕ ಹಾಗೂ ಆಧುನಿಕ ಬೋಟುಗಳು ಆ ಸ್ಥಳವನ್ನು ಕೇವಲ ಎರಡು ನಿಮಿಷಗಳಲ್ಲಿ ತಲುಪುತ್ತವೆ ಎಂದು ಹೇಮಾಮಾಲಿನಿ ಹಲವಾರು ಟ್ವೀಟ್‌ಗಳನ್ನು ಮಾಡಿದ್ದರಲ್ಲದೆ ತಮ್ಮ ಫೋಟೊಗಳನ್ನೂ ಶುಕ್ರವಾರ ಅಪ್ ಲೋಡ್ ಮಾಡಿದ್ದರು.
ಇವುಗಳನ್ನು ಗಮನಿಸಿದ್ದೇ ತಡ ಮಥುರಾದ ಹಿಂಸೆಯಿಂದ ಕಂಗೆಟ್ಟ ಹಲವರು ಸಂಸದೆ ಹಾಗೂ ನಟಿಗೆ ಟೀಕೆಗಳ ಮಹಾಪೂರವನ್ನೇ ಹರಿಸಿದರು. ಪರಿಸ್ಥಿತಿ ಗಂಭೀರವಾಗುತ್ತಿದೆಯೆಂದು ಅರಿತ ಕೂಡಲೇ ಈ ಬಿಜೆಪಿ ಸಂಸದೆ ತನ್ನ ಟ್ವೀಟ್ ಹಾಗೂ ಫೋಟೊಗಳನ್ನು ಡಿಲೀಟ್ ಮಾಡಲು ಮರೆಯಲಿಲ್ಲ.
ಮಥುರಾ ಉರಿಯುತ್ತಿರುವಾಗ ಅಲ್ಲಿನ ಸಂಸದೆ ತನ್ನ ಶೂಟಿಂಗ್ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ ಹಾಗೂ ನಂತರ ಟ್ವಿಟರಿಗರ ಆಕ್ರೋಶ ಎದುರಿಸಲಾಗದೆ ಅವುಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಹಲವರು ಹೇಳಿಕೊಂಡಿದ್ದಾರೆ. ಒಬ್ಬರಂತೂ ಚಿತ್ರ ತಾರೆಯರನ್ನು ಸಂಸದರಾಗಿಸಿದರೆ ಆಗುವ ಗತಿ ಇದೇ ಎಂದು ಹೇಳಿದ್ದಾರೆ.





